ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡಿರುವ ಗೂಂಡಾಗಳು ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಮುನಿರತ್ನ ಮೇಲಿನ ಮೊಟ್ಟೆ ದಾಳಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಸಜ ಮುನಿರತ್ನ ಆರೋಗ್ಯ ವಿಚಾರಿಸಲು ಬಿವೈ ವಿಜಯೇಂದ್ರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಶ್ರೀ ಸಿ.ಟಿ ರವಿ ಅವರ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿರುವ ಸರ್ಕಾರದ ಧೋರಣೆಯಿಂದ ಪ್ರೇರಣೆ ಪಡೆದಿರುವ ಕಾಂಗ್ರೆಸ್ ಗೂಂಡಾಗಳು ಇಂದು ನಮ್ಮ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಹ್ಯೇಯಕರ ಹಾಗೂ ಖಂಡನೀಯ.
ಜನರಿಗೆ ರಕ್ಷಣೆ ನೀಡಬೇಕಾದ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಪಾಡೇನು ಎಂಬ ಆತಂಕ ಉಲ್ಬಣಗೊಳ್ಳುತ್ತಿದೆ. ಸಾಮಾಜಿಕ ಸುಭದ್ರತೆಯಿಲ್ಲದ ಅರಾಜಕತೆಯ ರಾಜ್ಯವನ್ನು ನಿರ್ಮಿಸಲು ಕಾಂಗ್ರೆಸ್ ಹೊರಟಂತಿದೆ. ಶಾಸಕ ಮುನಿರತ್ನ ಅವರ ಮೇಲೆ ಆಪಾದನೆಗಳೇನೇ ಇರಲಿ ಅದಕ್ಕೆ ನ್ಯಾಯದ ಪರಿಧಿಯಲ್ಲಿ ಉತ್ತರ ಸಿಗುತ್ತದೆ. ಆದರೆ ಜನರಿಂದ ಆಯ್ಕೆಯಾದ ಶಾಸಕರೊಬ್ಬರನ್ನು ಹಾಡು ಹಗಲಲ್ಲೇ ಹತ್ಯೆ ಮಾಡುವ ಸಂಚುರೂಪಿಸಿ ಹಲ್ಲೆ ನಡೆಸುವ ಪರಿಸ್ಥಿತಿ ಉದ್ಭವಿಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.
ಕಾನೂನು ಸುವ್ಯವಸ್ಥೆಯು ಸಂಪೂರ್ಣ ಆದೋಗತಿಗೆ ಇಳಿದಿರುವ ಪರಿಸ್ಥಿತಿಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಹೋರಾಟ ಕೈಗೆತ್ತಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ತೇಪೆ ಸಾರಿಸಲು ಪ್ರಯತ್ನಿಸಿದರೆ ತಕ್ಕನಾದ ಉತ್ತರ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿರಬೇಕಾಗುತ್ತದೆ ಎಂದು ಎಚ್ಚರಿಸ ಬಯಸುತ್ತೇನೆ.<>