Publish Date: Wed, 17 Sep 2025 (16:00 IST)
Updated Date: Wed, 17 Sep 2025 (16:03 IST)
ಬೆಂಗಳೂರು: ನರೇಂದ್ರ ಮೋದಿಜೀ ಅವರ ವ್ಯಕ್ತಿತ್ವ, ನಾಯಕತ್ವ, ದೂರದೃಷ್ಟಿ ಕೇವಲ ಭಾರತೀಯರಿಗೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ಆದರ್ಶ ಮತ್ತು ಪ್ರೇರಣೆ ನೀಡುವಂತಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನದಡಿ ಇಂದು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ 75 ಪೌರ ಕಾರ್ಮಿಕರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು. ಮೋದಿಜೀ ಅವರ ಜನ್ಮದಿನವನ್ನು ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ಇದು ಮೋದಿಯವರ ವ್ಯಕ್ತಿತ್ವದ ಪ್ರತಿಬಿಂಬ ಎಂದರೆ ತಪ್ಪಾಗಲಾರದು ಎಂದು ವಿಶ್ಲೇಷಿಸಿದರು.
ದೇಶಾದ್ಯಂತ ನಮ್ಮ ಪಕ್ಷದ ಕೋಟ್ಯಂತರ ಕಾರ್ಯಕರ್ತರು, ಅಭಿಮಾನಿಗಳು ಸ್ವಯಂಪ್ರೇರಣೆಯಿಂದ ಸಾರ್ಥಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು. ಮೋದಿಜೀ ಅವರು ತಮ್ಮನ್ನು ತಾವು ಪ್ರಧಾನ ಸೇವಕ ಎಂದು ಕರೆದುಕೊಳ್ಳುತ್ತಾರೆ. ಅಧಿಕಾರವನ್ನು ಸ್ಥಾನಮಾನ ಎಂದು ಪರಿಗಣಿಸದೇ, ಸೇವೆಯ ಸಾಧನ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಭಾರತವು ಮೋದಿಯವರ ನೇತೃತ್ವದಲ್ಲಿ ಕೇವಲ 10-12 ವರ್ಷಗಳಲ್ಲಿ ಜಗತ್ತಿನ ಅಗ್ರಮಾನ್ಯ ರಾಷ್ಟ್ರವಾಗಿ ಪರಿವರ್ತನೆ ಹೊಂದಿದೆ. ಇವತ್ತು ಜಗತ್ತಿನಲ್ಲಿ ಪ್ರತಿಯೊಂದು ವಿಚಾರಕ್ಕೂ ಭಾರತವನ್ನು ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಮೋದಿಯವರ ಸಂದೇಶಗಳನ್ನು ನಾವೆಲ್ಲರೂ ಮನೆ ಮನೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು. ದೇಶ ನಿರ್ಮಾಣದಲ್ಲಿ ನಾವೆಲ್ಲ ಒಟ್ಟಿಗೆ ಇರಬೇಕು ಎಂದು ತಿಳಿಸಿದರು.