Publish Date: Wed, 06 May 2026 (14:21 IST)
Updated Date: Wed, 06 May 2026 (14:27 IST)
ಚಿತ್ರದುರ್ಗ: ಮೇ 9ರಂದು ಬೆಳಿಗ್ಗೆ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ನಡೆಯಲಿದೆ. ಆದ್ದರಿಂದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‍ವೈ ಅಭಿಮಾನೋತ್ಸವವು ಬೆಳಿಗ್ಗೆಯ ಬದಲಾಗಿ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. 3.45ರವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ ಅವರು ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಪ್ರತಿಮ ಹೋರಾಟಗಾರ, ರೈತ ನಾಯಕ, ಬಡವರ ಕಣ್ಮಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರ್ಷಗಳ ಪಯಣ ಪೂರೈಸಿದ ಶುಭ ಘಳಿಗೆಯಲ್ಲಿ ಬಿ.ಎಸ್.ವೈ ಅವರ ಅಭಿಮಾನೋತ್ಸವವನ್ನು ನಡೆಸಲಾಗುತ್ತಿದೆ. ಈ ಸಂಬಂಧ ವ್ಯಾಪಕ ಸಿದ್ಧತೆ ನಡೆದಿದೆ ಎಂದು ವಿವರಿಸಿದರು. 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಬರಲಿದ್ದಾರೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೆ ಹೋಗಿ ಸ್ವಾಮೀಜಿಗಳಿಗೆ ಆಮಂತ್ರಣಪತ್ರ ನೀಡಲು ಯೋಜಿಸಿದ್ದೆವು. ಸಮಯದ ಅಭಾವದಿಂದ ಎಲ್ಲರ ಭೇಟಿ ಸಾಧ್ಯವಾಗಿಲ್ಲ. ನಾಡಿನ ಎಲ್ಲ ಹರಗುರು ಚರಮೂರ್ತಿಗಳು, ಮಠಾಧೀಶರು, ಸ್ವಾಮೀಜಿಗಳು 9ರಂದು ಐತಿಹಾಸಿಕ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. ಎಲ್ಲ ಸಮಾಜದ ಗುರುಗಳು ಬಂದು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಅಭಿಮಾನಿಗಳು ಆಗಮಿಸಲು 10 ಸಾವಿರ ಬಸ್‍ಗಳನ್ನು ಬುಕಿಂಗ್ ಮಾಡಲಾಗಿದೆ. 45ರಿಂದ 50 ಸಾವಿರ ಕಾರು ಮತ್ತಿತರ ಚತುಶ್ಚಕ್ರ ವಾಹನಗಳು ಬರಲಿವೆ. ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ. ಸ್ವಾಮೀಜಿಗಳು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2 ಗ್ರಂಥಗಳ ಬಿಡುಗಡೆ- ಗೋವಿಂದ ಕಾರಜೋಳ
ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಮಾಜಸೇವೆ, ಜೀವನಚರಿತ್ರೆಯನ್ನು ನಾವು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಒಂದು ಸಾಂಸ್ಕøತಿಕ ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದೇವೆ. ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಸಂಬಂಧ ಕೆಂದಾವರೆ- ಕಮಲದಲ್ಲಿ ಅರಳಿದ ಹೂ ಸದನದಲ್ಲಿ ಶಿಕಾರಿ ಎಂಬ 2 ಗ್ರಂಥಗಳನ್ನು ಅವತ್ತು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
8ರಂದು ಸಂಜೆ ಯಡಿಯೂರಪ್ಪನವರ ಪುರಪ್ರವೇಶ
8ರಂದು ಸಂಜೆ ಯಡಿಯೂರಪ್ಪನವರ ಪುರಪ್ರವೇಶ ನಡೆಯಲಿದೆ. ಇದನ್ನು ನಾಡಿನ ಸಾಂಸ್ಕøತಿಕ ಹಬ್ಬದ ರೀತಿಯಲ್ಲಿ ಮಾಡಲು ತಯಾರಿ ಮಾಡಿದ್ದೇವೆ. 24 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ