ಬೆಂಗಳೂರು: ತುಂಗಭದ್ರಾ ಜಲಾಶಯದ 16ನೇ ಕ್ರೆಸ್ಟ್ ಗೇಟ್ ಮುರಿದು ಹೋಗಿರುವ ಬೆನ್ನಲ್ಲೇ ರಾಜ್ಯದ ಎಲ್ಲ ಅಣೆಕಟ್ಟುಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದೆ, ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್‌ನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿದ್ದು, ರೈತರು ಸೇರಿದಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಒಂದೆರಡು ದಿನಗಳಲ್ಲಿ ರಾಜ್ಯದ ಎಲ್ಲ ಅಣೆಕಟ್ಟುಗಳ ಸ್ಥಿತಿಗತಿಗಳ ಬಗ್ಗೆ ತಜ್ಞರ ಸಮಿತಿ ರಚಿಸಿ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು ಎಂದರು.
ಕೊಪ್ಪಳ ಜಿಲ್ಲಾ ಕೇಂದ್ರ ಪಟ್ಟಣದ ಸಮೀಪವಿರುವ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್‌ನ ಸರಪಳಿ ಸಂಪರ್ಕ ಕಡಿತಗೊಂಡು ಭಾರೀ ಪ್ರಮಾಣದ ನೀರು ಹೊರಬರುತ್ತಿದೆ. ಆದ್ದರಿಂದ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.