ಬೆಂಗಳೂರು: ಬಿಪಿಎಲ್ ಕಾರ್ಡ್ ಇದ್ದವರಿಗೆ ಸರ್ಕಾರ ರಾತ್ರೋ ರಾತ್ರಿ ಶಾಕ್ ಕೊಟ್ಟಿದೆ. ರಾಜ್ಯದ ಸುಮಾರು 60 ಸಾವಿರ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದ ಹಾಗೆ ಎಪಿಎಲ್ ಕಾರ್ಡ್ ಆಗಿ ಬದಲಾಗಿದೆ.
ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದರಂತೆ ಅನರ್ಹ ಕಾರ್ಡ್ ಗಳನ್ನು ರದ್ದುಗೊಳಿಸುವುದಾಗಿ ಈಗಾಗಲೇ ಸೂಚನೆ ನೀಡಿತ್ತು. ಆದಾಯ ತೆರಿಗೆ ಪಾವತಿ ಮಾಡುವವರು ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಅಂತಹ ಕಾರ್ಡ್ ಗಳನ್ನು ರದ್ದುಗೊಳಿಸಲಾಗುವುದು ಎಂದು ಸರ್ಕಾರ ಈಗಾಗಲೇ ಮಾನದಂಡ ಹೇಳಿತ್ತು.
ಅದರಂತೆ ಸರ್ಕಾರ ಪರಿಷ್ಕರಣೆ ನಡೆಸಿದೆ. ಸುಮಾರು 12 ಲಕ್ಷ ಅನರ್ಹ ಕಾರ್ಡ್ ಗಳನ್ನು ಪತ್ತೆ ಮಾಡಿತ್ತು. ಇದೀಗ ಏಕಾಏಕಿ 60 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ. ಆದರೆ ಈ ಬಗ್ಗೆ ಹಲವು ಗ್ರಾಹಕರಿಗೆ ತಿಳಿದೇ ಇಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ಮೇಲೆ ಬೆರಳಿಟ್ಟಾಗಲೇ ಸತ್ಯ ಗೊತ್ತಾಗಿರುವುದು.
ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವುದು ಗೊತ್ತಾದಾಗ ನೋಟಿಸ್ ನೀಡಲಾಗುತ್ತದೆ. ನಂತರದಲ್ಲಿ ಅಮಾನತಿನಲ್ಲಿಡಲಾಗುತ್ತದೆ. ಆದರೆ ಇಲ್ಲಿ ಯಾವುದೂ ಮಾಡಲಾಗಿಲ್ಲ ಎನ್ನುವುದು ಗ್ರಾಹಕರ ಅಳಲು. ಏಕಾಏಕಿ ಹೀಗೆ ಬಿಪಿಎಲ್ ಕಾರ್ಡ್ ನಿಂದ ತೆಗೆದು ಎಪಿಎಲ್ ಎಂದು ಮಾಡಿದರೆ ಹೇಗೆ ಎಂದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಈಗಲೇ ಹೋಗಿ ಚೆಕ್ ಮಾಡುವುದು ಉತ್ತಮ.