Publish Date: Sun, 11 Dec 2022 (12:08 IST)
Updated Date: Sun, 11 Dec 2022 (12:09 IST)
ಬಾಗಲಕೋಟೆ : ಬಾದಾಮಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ ಹಾಗೂ ರೈತರ ಪರ ದನಿ ಎತ್ತುತ್ತಿಲ್ಲ ಎಂಬ ಕಾರಣದಿಂದ ವಿಪಕ್ಷ ನಾಯಕ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರ ವಿರುದ್ಧ ಸ್ವಕ್ಷೇತ್ರದಲ್ಲೇ ಬಹಿಷ್ಕಾರದ ಕೂಗು ಕೇಳಿಬಂದಿದೆ.
ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಅನೇಕ ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸಿದ್ದರಾಮಯ್ಯ ತಿರುಗಿನೋಡಿಲ್ಲವೆಂದು ಹೇಳಿ ಬಾದಾಮಿಯ ಹಲಕುರ್ಕಿ ಗ್ರಾಮದ ಜನ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಬಹಿಷ್ಕಾರ ಹಾಕಲು ಹಲಕುರ್ಕಿ ಗ್ರಾಮದ ಜನ ನಿರ್ಧರಿಸಿದ್ದಾರೆ. ಗ್ರಾಮದ 2 ಸಾವಿರ ಎಕರೆ ಭೂಪ್ರದೇಶವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.