ಬೆಂಗಳೂರು: ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕಲು ಹೋಗಿ ರೈಲು ಡಿಕ್ಕಿಯಾದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತ ಬಾಲಕನನ್ನು ಯೋಗೇಂದ್ರ ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ಮತ್ತು ಚನ್ನಮ್ಮ ದಂಪತಿ ಮಗ ಯೋಗೆಂದ್ರ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಸಾಕು ನಾಯಿ ಕಾಣೆಯಾಗಿತ್ತು. ಕಾಣೆಯಾದ ನಾಯಿಯ ಹುಡುಕಾಟಕ್ಕೆ ತನ್ನ ಪೋಷಕರೊಂದಿಗೆ ಹೋಗಿದ್ದಾನೆ. ಈ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ.
ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಯೋಗೇಂದ್ರ ಲಾಂಗ್ ಜಂಪ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಶವಗಾರದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.