ಕೋಲಾರ: ಮುರುಡೇಶ್ವರದ ಸಮುದ್ರದಲ್ಲಿ ಸೋಮವಾರ ಕಣ್ಮರೆಯಾಗಿದ್ದ ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೂವರು ವಿದ್ಯಾರ್ಥಿನಿಯರ ಮೃತದೇಹ ಬುಧವಾರ ಪತ್ತೆಯಾಗಿದೆ. ಈ ಮಧ್ಯೆ ಶಾಲೆಯ ಪ್ರಾಂಶುಪಾಲೆ ಮತ್ತು ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದು, ಒಬ್ಬ ವಿದ್ಯಾರ್ಥಿನಿ ಮಂಗಳವಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಳು. ಮೂವರು ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದರು. ಮುಳುಗುತಜ್ಞರ ನೆರವಿನಿಂದ ಬುಧವಾರ ಶವ ಪತ್ತೆಮಾಡಲಾಗಿದೆ.
ಶ್ರಾವಂತಿ ಗೋಪಾಲಪ್ಪ (15) ಮೃತ ಮಂಗಳವಾರವೇ ಪತ್ತೆಯಾಗಿತ್ತು. ದೀಕ್ಷಾ ಜೆ. (15), ಲಾವಣ್ಯ (15) ಹಾಗೂ ವಂದನಾ (15) ಅವರ ಶವ ಮರುದಿನ ಸಿಕ್ಕಿದೆ. ಅಸ್ವಸ್ಥಗೊಂಡ ಯಶೋದಾ (15), ವೀಕ್ಷಣಾ (15) ಹಾಗೂ ಲಿಪಿಕಾ (15) ಮುರುಡೇಶ್ವರದ ಆರ್‌ಎನ್‌ಎಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಎಂ.ಕೊತ್ತೂರು ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರು.
ವಸತಿ ಶಾಲೆಯ 46 ವಿದ್ಯಾರ್ಥಿಗಳು ಹಾಗೂ 8 ಶಿಕ್ಷಕರು ಸೇರಿದಂತೆ 54 ಮಂದಿ ಭಾನುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಹಾಗೂ ಅತಿಥಿ ಶಿಕ್ಷಕರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಮೃತರ ಕುಟುಂಬಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ (ಕ್ರೈಸ್) ₹ 5 ಲಕ್ಷ ಪರಿಹಾರ ಘೋಷಿಸಲಾಗಿದೆ.