Publish Date: Wed, 08 May 2024 (18:19 IST)
Updated Date: Wed, 08 May 2024 (18:23 IST)
ಬೆಂಗಳೂರು: ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದಿನಿಂದಲೂ ಮಾಡಿದ ಆರೋಪಗಳು ಯಾವುದೂ ಸಾಬೀತಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಎಚ್ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಸೂತ್ರಧಾರಿ ಡಿಕೆಶಿ ಎಂದು ಆರೋಪಿಸಿದ್ದರು. ಅದಲ್ಲದೆ ಡಿಕೆಶಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದಿನಿಂದಲೂ ಮಾಡಿದ ಆರೋಪಗಳು ಯಾವುದೂ ಸಾಬೀತಾಗಿಲ್ಲ, ಪ್ರಜ್ವಲ್ ರೇವಣ್ಣ ಸೆಕ್ಸ್ ಗೇಟ್ ಪ್ರಕರಣದಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಅವರು ಪದೇ ಪದೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಈ ಕೇಸಿನ ಹಿಂದೆ ಇರುವುದು ಬ್ಲಾಕ್ ಮೇಲ್ ಕಿಂಗ್ ಕುಮಾರಸ್ವಾಮಿ. ರಾಜಕಾರಣಿಗಳು, ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವುದೇ ಅವರ ಕೆಲಸ. ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಎತ್ತದಿದ್ದರೆ ನಿದ್ದೆ ಬರಲ್ಲ. ಈಗಲೂ ನಾನು ಹೇಳುತ್ತಿದ್ದೇನೆ ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ.
ನಮ್ಮದು ರೇವಣ್ಣ ಅವರದು ಬೇರೆ ಕುಟುಂಬ ಅಂತ ಹಿಂದೆ ಅವರೇ ಹೇಳಿದ್ದರು. ಉಪ್ಪು ತಿಂದವನು ನೀರು ಕುಡಿಯಬೇಕು ಅಂತ ಕೂಡ ಹೇಳಿದ್ರು, ಈಗ ಯಾಕೆ ಮತ್ತೆ ಹಿಟ್ ಅಂಡ್ ರನ್ ಮಾಡ್ತಿದ್ದಾರೆ? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ಈಗಲೇ ತೀರ್ಪು ಕೊಡೋಕೆ ಕುಮಾರಸ್ವಾಮಿ ಅವರೇನು ಲಾಯರೋ? ಜಡ್ಜೋ? ಚರ್ಚೆ ಮಾಡಲು ಇನ್ನೂ ಟೈಮ್ ಇದೆ, ವಿಧಾನಸಭೆ ಅಧಿವೇಶನ ಇದೆ, ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ.
Sampriya
Publish Date: Wed, 08 May 2024 (18:19 IST)
Updated Date: Wed, 08 May 2024 (18:23 IST)