ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಿಸಿ ಬೆಲೆ ಹೆಚ್ಚಳ ಮಾಡಿದ್ದು ಎಲ್ಲರ ಆಕ್ರೋಶಕ್ಕೆ ಗುರಿಯಾಗಿದೆ. ಇಂದು ಈ ಬಗ್ಗೆ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ, ಸಿಎಂ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ 17.6.2024ರ ಬೆಳಿಗ್ಗೆ 11.00 ಗಂಟೆಗೆ “ಸ್ವಾತಂತ್ರ್ಯ ಉದ್ಯಾನವನದ ಬಳಿ ಬೃಹತ್ ಪ್ರತಿಭಟನೆ” ಯನ್ನು ಹಮ್ಮಿಕೊಳ್ಳಲಾಗಿದೆ. ನಂತರ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ. ಸದಾನಂದ ಗೌಡ, ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಕೆ. ರಾಮಮೂರ್ತಿ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ಥ ನಾರಾಯಣ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿಷ್ಠೆಯಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳವನ್ನು ಜನರಿಗೆ ಕೊಡುಗೆಯಾಗಿ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ಸಿನ ಬೆಲೆ ಏರಿಕೆಯ ಗ್ಯಾರಂಟಿ: ಡಾ.ಅಶ್ವತ್ಥನಾರಾಯಣ್
ಕಾಂಗ್ರೆಸ್ ಸರಕಾರವು ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ ನೀರಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಮಾಡಿದೆ. ವಾಹನಗಳ ತೆರಿಗೆ, ಆಸ್ತಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸಾಲ ಪಡೆಯಲು ಬ್ಯಾಂಕಿಗೆ ಹೋದರೆ ರಿಜಿಸ್ಟ್ರೇಶನ್ ದರವನ್ನೂ ಹೆಚ್ಚಿಸಲಾಗಿದೆ ಎಂದಿದ್ದರು.
ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು, ಚುನಾವಣೆ ವೇಳೆ ಬೆಲೆ ಇಳಿಸುವ ಭರವಸೆ ಕೊಟ್ಟಿದ್ದರು. ಇದೀಗ ರಾಜ್ಯದ ಜನತೆಗೆ ಕಾಂಗ್ರೆಸ್ಸಿನವರದು ಬೆಲೆ ಏರಿಕೆಯ ಗ್ಯಾರಂಟಿ ಎಂದು ಲೇವಡಿ ಮಾಡಿದ್ದರು.
ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 3 ರೂ. ಮತ್ತು ಡೀಸೆಲ್ ಬೆಲೆ 3.50 ರೂ ಏರಿಸಿದ್ದಾರೆ. ಕರ್ನಾಟಕ ಸೇಲ್ಸ್ ಟ್ಯಾಕ್ಸನ್ನು ಶೇ 26ರಿಂದ ಶೇ 30ಕ್ಕೆ ಏರಿಸಿದ್ದಾರೆ. ಡೀಸೆಲ್ ತೆರಿಗೆಯನ್ನು ಶೇ 14ರಿಂದ 18 ಶೇಕಡಾಕ್ಕೆ ಏರಿಸಿದ್ದಾರೆ ಎಂದು ಟೀಕಿಸಿದ್ದರು.
ಹಿಂದೆ ಒಂದು ರೂ. ಹೆಚ್ಚಳ ಮಾಡಿದ್ದಾಗ ಹಣಕಾಸು ಸಚಿವ, ಆರ್ಥಿಕ ತಜ್ಞರಾಗಿ ಸಿದ್ದರಾಮಯ್ಯನವರು ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ ಎಂದು ಪ್ರಬಲವಾಗಿ ವಿರೋಧಿಸಿದ್ದರು. ನಾಚಿಕೆ ಆಗಲ್ವ ಎಂಬ ಭಾಷೆಯನ್ನೂ ಬಳಸಿದ್ದರು. ಇವತ್ತು ವಿದ್ಯುತ್ ದರವನ್ನು ಶೇ 100ರಿಂದ 150ರಷ್ಟು ಏರಿಸಿದ್ದಾರೆ. ಯಾವ ರೀತಿ ಇವರು ಸಮಜಾಯಿಷಿ ಕೊಡುತ್ತಾರೆ ಎಂದು ಪ್ರಶ್ನಿಸಿದ್ದರು.
ಸ್ವಾತಂತ್ರ್ಯ ಬಂದ ಬಳಿಕ ಎಂದೂ ಕಾಣದಂಥ ಕೆಟ್ಟ ಆಡಳಿತ ಇದು ಎಂದು ಟೀಕಿಸಿದರು. ಕೆಟ್ಟ ನಿರ್ಧಾರ, ದರ ಏರಿಕೆಗಳನ್ನು ಏಕಾಏಕಿ ಮಾಡುತ್ತಿದ್ದಾರೆ. ಯಾವುದೇ ಸಮಾಲೋಚನೆ, ಮಾತುಕತೆ ಇಲ್ಲದೆ, ಸ್ಪಷ್ಟತೆ ಇಲ್ಲದೆ ಅಧಿಕಾರದ ದುರ್ಬಳಕೆ ಆಗುತ್ತಿದೆ ಎಂದು ದೂರಿದ್ದರು.
ಬಿಜೆಪಿ ಆಡಳಿತ ನಡೆಸುವ ಹರಿಯಾಣ ರಾಜ್ಯದಲ್ಲಿ 95.54 ರೂ, ಉತ್ತರ ಪ್ರದೇಶದಲ್ಲಿ 94.55 ರೂ, ಗುಜರಾತ್- 94.50 ರೂ., ಅಸ್ಸಾಂ 97 ರೂ., ದರ ಇದೆ. ಆದರೆ, ಕಾಂಗ್ರೆಸ್ ಆಡಳಿತ ಮಾಡುವ ರಾಜ್ಯಗಳಲ್ಲಿ 103 ರೂ, 107 ರೂ, ತೆಲಂಗಾಣದಲ್ಲಿ 109.50 ರೂ., ಬಿಜೆಪಿಯೇತರ ಆಡಳಿತ ಇರುವ ಕೇರಳದಲ್ಲಿ 105.68 ರೂ., ದರ ಇದೆ ಎಂದು ವಿವರ ನೀಡಿದ್ದರು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಪರ ವಾತಾವರಣ ಇಲ್ಲ. ನೆಗೆಟಿವ್ ರೇಟಿಂಗ್ ಇದೆ ಎಂದು ವಿಶ್ಲೇಷಿಸಿದರು. ಭೂಮಿ ಸಿಗಲ್ಲ; ನೀರು ಕೊಡುವುದಿಲ್ಲ, ಕರೆಂಟ್ ದರ ಹೆಚ್ಚು, ಇಂಥ ಹತ್ತಾರು ಸಮಸ್ಯೆಗಳಿವೆ ಎಂದು ವಿವರಿಸಿದರು. ಆರ್ಥಿಕ ವ್ಯವಸ್ಥೆ ಹೆಚ್ಚಿಸಿ ಆದಾಯ ಹೆಚ್ಚಿಸಬೇಕಿತ್ತು. ಇರುವವರನ್ನೇ ಪೂರ್ತಿ ಕತ್ತು ಕುಯ್ದು ಇರುವಂಥವರು ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ಆಡಳಿತ ಮಾಡುತ್ತಿರುವವರು ಕಾಂಗ್ರೆಸ್ಸಿಗರು ಎಂದಿದ್ದರು.