Select Your Language

Notifications

webdunia
webdunia
webdunia
webdunia

ಒಂದು ಕೋಮಿನ ಮೇಲೆ ರಾಜ್ಯ ಸರ್ಕಾರಕ್ಕೆ ಪ್ರೀತಿ, ಕೇಸ್ ಹಿಂಪಡೆದಿದ್ದಕ್ಕೆ ಕೇಂದ್ರಕ್ಕೆ ದೂರು: ಬಿಜೆಪಿ

Chalavadi Narayanaswamy

Krishnaveni K

ಬೆಂಗಳೂರು , ಶನಿವಾರ, 12 ಅಕ್ಟೋಬರ್ 2024 (14:20 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರಕಾರದ ಕಾನೂನು ಸಚಿವರಿಗೆ ಇವತ್ತೇ ಪತ್ರ ಬರೆಯುವುದಾಗಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಕಟಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಈಚೆಗೆ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು, ಕಲ್ಲು ತೂರಿದವರು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಗಲಭೆ ಮಾಡಿದ 100-150 ಜನ ಕ್ರಿಮಿನಲ್‍ಗಳ ಮೇಲಿನ ಕೇಸುಗಳನ್ನು ಹಿಂಪಡೆದಿದೆ. ಈ ಮೂಲಕ ಒಂದು ಸಮುದಾಯವನ್ನು ಓಲೈಕೆ ಮಾಡಲು ತುಷ್ಟೀಕರಣ ರಾಜಕೀಯ ಮಾಡಿದೆ ಎಂದು ಖಂಡಿಸಿದರು.
ಹುಬ್ಬಳ್ಳಿಯಲ್ಲಿ ಆದುದು ಗಂಭೀರ ಅಪರಾಧ. ಅಂಥ ಪ್ರಕರಣ ಹಿಂಪಡೆಯುವ ನಿರ್ಧಾರದ ಸಂಬಂಧ ಮಾನ್ಯ ರಾಷ್ಟ್ರಪತಿಗಳು, ಪ್ರಧಾನಿಯವರ ಹಾಗೂ ಕೇಂದ್ರದ ಗೃಹ ಸಚಿವರ ಗಮನ ಸೆಳೆಯುತ್ತೇನೆ. ಅವರಿಗೂ ಪತ್ರ ಬರೆಯುವೆ ಎಂದು ತಿಳಿಸಿದರು. 

ಇದು ಸರಕಾರ ಮಾಡಿದ ಅಕ್ಷಮ್ಯ ಅಪರಾಧ. ಸಂಘಟಿತ ಅಪರಾಧ ಮಾಡಿದವರ ಕೇಸ್ ವಾಪಸ್ ಪಡೆಯುವ ಮೂಲಕ ಇನ್ನೊಂದು ಸಂಘಟಿತ ಅಪರಾಧವನ್ನು ರಾಜ್ಯದ ಸಚಿವಸಂಪುಟ ಮಾಡಿದೆ ಎಂದು ಟೀಕಿಸಿದರು. ಇದರ ಬಗ್ಗೆ ‘ತುಷ್ಟೀಕರಣ ರಾಜಕೀಯ’ ಎಂದು ಜನರ ಗಮನ ಸೆಳೆಯುತ್ತೇವೆ; ಕೇಸಿನ ವಾಪಸಾತಿಯ ಸಂಬಂಧ ಹೈಕೋರ್ಟಿನಲ್ಲಿ ಚಾಲೆಂಜ್ ಮಾಡಲಿದ್ದೇವೆ. ಟ್ರಯಲ್ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದ್ದು, ಅಲ್ಲಿ ಕೂಡ ನಮ್ಮ ಪಕ್ಷದಿಂದ ಆಕ್ಷೇಪ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ನೀವು ಹಾಗಿದ್ದರೆ ಹುಬ್ಬಳ್ಳಿ, ಮಂಗಳೂರು, ಉಡುಪಿ, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್‍ಗಳನ್ನು ಯಾಕೆ ವಾಪಸ್ ಪಡೆದಿಲ್ಲ ಎಂದು ಅವರು ಸರಕಾರವನ್ನು ಪ್ರಶ್ನಿಸಿದರು. ಹಿಂದೂಗಳು ಮಾತ್ರ ಕ್ರಿಮಿನಲ್‍ಗಳು, ಇವರು ಕ್ರಿಮಿನಲ್‍ಗಳಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸರಕಾರದ ಉದ್ದೇಶ ಏನು? ಇದು ತುಷ್ಟೀಕರಣ ರಾಜಕೀಯವಲ್ಲವೇ? ಒಂದು ಸಮುದಾಯದ ಪರ ನಿಲ್ಲುವ ಸರಕಾರ ನಮಗೆ ಬೇಕೇ ಎಂದು ಕೇಳಿದರು.

ಸಿ.ಟಿ.ರವಿ ಅವರ ಕೇಸನ್ನೂ ವಾಪಸ್ ಪಡೆದುದಾಗಿ ಹೇಳಿದ್ದಾರೆ. ಅದೇನು ಕ್ರಿಮಿನಲ್ ಕೇಸಾ ಎಂದು ಪ್ರಶ್ನಿಸಿದರು. ಸಿ.ಟಿ.ರವಿ ಅವರು ಶಾಸಕ, ಹಿಂದೆ ಸಚಿವರಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಒಳ್ಳೆಯ ಹೆಸರು ಪಡೆದವರು. ಅವರೇನು ಕ್ರಿಮಿನಲ್ಲಾ? ಎಂದರು. ಮುಡಾ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಣ ದುರುಪಯೋಗ, ಕೆಕೆಆರ್‍ಡಿಪಿಯಲ್ಲಿ ಸಾವಿರಾರು ಕೋಟಿ ಹಣ ನುಂಗಿದ್ದು, ವಾಲ್ಮೀಕಿ ನಿಗಮದ ಹಣ ನುಂಗಿದ ಆಪಾದನೆಗಳಿಂದ ನುಣುಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರಕಾರ ಎಲ್ಲ ವಿಷಯಗಳಲ್ಲೂ ವಿಫಲವಾಗಿದೆ. ರಾಜು ಕಾಗೆಯವರು ನಮ್ಮ ಪಕ್ಷದವರಲ್ಲ; ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ರೈತರು ಸಾಯುತ್ತಿರುವುದಾಗಿ ಹೇಳಿ ರಾಜೀನಾಮೆ ನೀಡಲು ಸಿದ್ಧ ಎಂದಿರುವುದಾಗಿ ಗಮನ ಸೆಳೆದರು. ಬೆಳಗಾವಿ ಸದನ ನಡೆಯುವಾಗ ರಾಜೀನಾಮೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ನಿಮ್ಮ ಯೋಗ್ಯತೆ ಏನೆಂದು ಅವರು ಬಯಲು ಮಾಡಿದ್ದಾರೆ ಎಂದು ವಿವರಿಸಿದರು. ಈ ಸರಕಾರ ಇನ್ನಷ್ಟು ದಿನ ಉಳಿಯಬೇಕೇ ಎಂದು ಕೇಳಿದ್ದಾಗಿ ಹೇಳಿದರು.

40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಇದೇರೀತಿಯ ಮನಸ್ಥಿತಿಯಲ್ಲಿ ಇದ್ದಾರೆ. ಇದೆಲ್ಲ ಬೆಳಗಾವಿ ಸದನದ ವೇಳೆಗೆ ಸ್ಫೋಟಗೊಂಡು, ಸರಕಾರಕ್ಕೆ ಮೂರು ಕಾಸಿನ ಮರ್ಯಾದೆಯೂ ಉಳಿಯುವುದಿಲ್ಲ ಎಂದು ವಿಶ್ಲೇಷಿಸಿದರು.

ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಸರಕಾರ ಹೋಗಲಿದೆ ಎಂದಿದ್ದೇನೆ; ಪಲ್ಲಟ ಆಗಲಿದೆ ಎಂದರೆ ನಮ್ಮ ಕಡೆ ಒಂದಷ್ಟು ಜನ ಬರುತ್ತಾರೆ, ನಾವು ಸರಕಾರ ಮಾಡುತ್ತೇವೆ ಎಂದು ಅರ್ಥ ಮಾಡಿಕೊಳ್ಳಬೇಕಿಲ್ಲ. ನಾವು ಯಾವುದೇ ಕಾರಣಕ್ಕೂ ಚುನಾವಣೆ ಎದುರಿಸಲು ಸಿದ್ಧವೇ ಹೊರತು ಇವರನ್ನು ಸೇರಿಸಿಕೊಂಡು ಸರಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಅನುಮತಿ ಪಡೆದಿಲ್ಲ ಎಂಬಂಥ ಕೇಸುಗಳನ್ನು ಕೈಬಿಟ್ಟರೆ ಅದು ಸಹಜ. ಆದರೆ, ಪೊಲೀಸ್ ಠಾಣೆಗೆ ಬೆಂಕಿ ಇಡುವುದು, ಪೊಲೀಸ್ ವಾಹನಕ್ಕೆ ಬೆಂಕಿ ಇಡುವುದು- ಇಂಥ ಕೇಸನ್ನು ಕೈಬಿಟ್ಟರೆ ಸಹಿಸಲಾಗದು ಎಂದು ಪ್ರಶ್ನೆಗೆ ಉತ್ತರವಾಗಿ ಎಚ್ಚರಿಸಿದರು.

ಕೇಸು ದಾಖಲಾಗುತ್ತಿದ್ದಂತೆ ಬಿಜೆಪಿ ಶಾಸಕ ಮುನಿರತ್ನ ಬಂಧನ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಂಧಿಸದೆ ಬಿಟ್ಟ ಕ್ರಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಶಾಸಕರನ್ನು ರಕ್ಷಣೆ ಮಾಡುವಲ್ಲಿ ಈ ಸರಕಾರ ನಿರತವಾಗಿದೆ. ನಮ್ಮ ಶಾಸಕರು ಮಾತ್ರ ತಪ್ಪಿತಸ್ಥರು; ಅವರೆಲ್ಲ ಹರಿಶ್ಚಂದ್ರರ ಮಕ್ಕಳು. ಅಷ್ಟು ಮಾತ್ರ ಯಾಕೆ? ಚನ್ನಾರೆಡ್ಡಿಯವರ ಮೇಲೆ ಎಫ್‍ಐಆರ್ ಆಗಿ ಮೂರು ತಿಂಗಳಾಗಿದೆ. ಜಾತಿ ನಿಂದನೆ ಕೇಸಿದ್ದರೂ ಅವರನ್ನು ಇವತ್ತಿಗೂ ರಕ್ಷಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಕ್ಲೀನ್ ಚಿಟ್ ಪಡೆಯಲು ಎಸ್‍ಐಟಿ, ಸಿಐಡಿ ಬಳಸಿಕೊಳ್ಳುತ್ತಾರೆ ಎಂದು ಟೀಕಿಸಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಹರಿಯಾಣದ ಸಿಎಂ ಆಗಿ ಸೈನಿ ಇದೇ 17ರಂದು ಪ್ರಮಾಣ ವಚನ: ಪ್ರಧಾನಿ ಮೋದಿ ಭಾಗಿ