Webdunia - Bharat's app for daily news and videos

Install App

ಸಾರಿಗೆ ನೌಕರರ ಮುಷ್ಕರಕ್ಕೆ ಬಿಜೆಪಿ ಬೆಂಬಲ: ಸರ್ಕಾರದ ವಿರುದ್ಧ ವಾಗ್ದಾಳಿ

Krishnaveni K
ಶನಿವಾರ, 28 ಡಿಸೆಂಬರ್ 2024 (14:13 IST)
ಬೆಂಗಳೂರು: ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ಈ ಸರಕಾರ ತಂದು ನಿಲ್ಲಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆಕ್ಷೇಪಿಸಿದರು.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರು ನಾಳೆಯಿಂದ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಸಾರಿಗೆ ಇಲಾಖೆ ನೌಕರರ ಜೊತೆಗೆ ಬಿಜೆಪಿ ನಿಲ್ಲಲಿದೆ. ಸಾರಿಗೆ ಇಲಾಖೆ ಸಚಿವರಿಗೆ ತನ್ನ ಇಲಾಖೆಯ ಆರ್ಥಿಕ ಸ್ಥಿತಿಗತಿಯೇನೆಂದು ಅರ್ಥವಾಗಿಲ್ಲದೇ ಇರುವುದು ದುರಂತ ಎಂದು ಟೀಕಿಸಿದರು.
 
ಸಚಿವ ರಾಮಲಿಂಗಾರೆಡ್ಡಿಯವರು ಇಲಾಖೆ ಲಾಭದಲ್ಲಿದೆ ಎನ್ನುತ್ತಾರೆ. ಸಚಿವರೇ ಇಷ್ಟು ಅಜ್ಞಾನಿಗಳಾದರೆ ಇನ್ನು ಜನಸಾಮಾನ್ಯರ ಪಾಡೇನು; ಇದು ರಾಜ್ಯದ ದುರ್ದೈವ ಎಂದು ವ್ಯಂಗ್ಯವಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರು ಬಿಎಂಟಿಸಿಯ ಎಂ.ಡಿ. ಆಗಿದ್ದಾಗ ಆ ಸಂಸ್ಥೆಯನ್ನು ನಷ್ಟದಿಂದ ಲಾಭಕ್ಕೆ ತಂದರು. ಇಲಾಖೆಗೆ ಬಹಳಷ್ಟು ಆಸ್ತಿಯನ್ನೂ ಮಾಡಿದ್ದರು ಎಂದು ವಿವರಿಸಿದರು. 700 ಕೋಟಿ ಮೊತ್ತವನ್ನು ಠೇವಣಿ ಇಟ್ಟಿದ್ದರು ಎಂದರು.
ಸರಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ಆಸ್ತಿಯನ್ನು ಮಾರಾಟ ಮಾಡಲು ಈ ಸರಕಾರ ಹೊರಟಿದೆ. ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
 
ಸಿದ್ದರಾಮಯ್ಯನವರು ಜಾತ್ರೆ ಮಾಡುತ್ತಲೇ ಇದ್ದಾರೆ
ಡಿಸೆಂಬರ್ ಅಂತ್ಯಕ್ಕೆ ಅಂದರೆ ಇಂದಿನವರೆಗೆ ಸಾರಿಗೆ ಇಲಾಖೆಗೆ ಈ ಸರಕಾರವು 7,401 ಕೋಟಿ ಕೊಡಬೇಕಿದೆ. ಭವಿಷ್ಯನಿಧಿ ನ್ಯಾಸ ಮಂಡಳಿಗೆ 2,500 ಕೋಟಿ, ನಿವೃತ್ತ ನೌಕರರ ಬಾಕಿ 362 ಕೋಟಿ, ಸಿಬ್ಬಂದಿಗಳ ಬಾಕಿ ಪಾವತಿ, ಸರಬರಾಜುದಾರರ ಬಿಲ್ ಪಾವತಿ, ಇಂಧನ ಬಾಕಿ ಸೇರಿ 1,000 ಕೋಟಿ, ಎಂವಿಸಿ ಕ್ಲೈಮ್‍ಗಳು, ಇತರ ಬಿಲ್‍ಗಳು, ನಿವೃತ್ತ ನೌಕರರ ಪರಿಷ್ಕøತ ಉಪ ಧನ, ರಜೆ ನಗದೀಕರಣ- 700 ಕೋಟಿ, ಒಟ್ಟು ಸಾಲದ ಬಾಕಿ ಹೊಣೆಗಾರಿಕೆ ಸೇರಿದಾಗ 5,614 ಕೋಟಿ ಆಗುತ್ತದೆ ಎಂದು ಪಿ. ರಾಜೀವ್ ಅವರು ವಿವರ ನೀಡಿದರು. ಬಾಕಿ ಮೊತ್ತಕ್ಕೆ ಸರಕಾರವು ಶೇ 10.5 ಬಡ್ಡಿ ಕಟ್ಟಬೇಕಿದೆ ಎಂದರು.
ಶಕ್ತಿ ಯೋಜನೆ ಅಡಿಯಲ್ಲಿ 2023-24ನೇ ಸಾಲಿನ ಬಾಕಿ 1180 ಕೋಟಿಯಷ್ಟಿದೆ. 2024-25ರಲ್ಲಿ ಬಾಕಿ ಉಳಿಸಿಕೊಂಡದ್ದು 607 ಕೋಟಿ- ಅಂದರೆ, 1787 ಕೋಟಿ ಬಾಕಿ ಇದೆ. ಆದರೆ, ಸಿದ್ದರಾಮಯ್ಯನವರು ಜಾತ್ರೆ ಮಾಡುತ್ತಲೇ ಇದ್ದಾರೆ. ಆ ಯೋಜನೆ ತಂದ್ಬಿಟ್ಟಿದ್ದೇವೆ; ಈ ಯೋಜನೆ ತಂದಿದ್ದೇವೆ ಎನ್ನುತ್ತಾರೆ. ಯಾವ ಪುರುಷಾರ್ಥ ಇದೆ ಇದರಲ್ಲಿ ಎಂದು ಪ್ರಶ್ನಿಸಿದರು. ಇರುವ ಆಸ್ತಿ ಸಂಪೂರ್ಣ ಮಾರಾಟ ಮಾಡಿ, ಇಲಾಖೆ ದಿವಾಳಿ ಮಾಡಿ ಇದನ್ನು ಸಾಧನೆ ಎನ್ನುವ ಮುಖ್ಯಮಂತ್ರಿಯನ್ನು ಈ ರಾಜ್ಯ ಹೊಂದಿರುವುದು ದುರಂತ ಎಂದು ತಿಳಿಸಿದರು.
 
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದ ಸಭೆಯಲ್ಲಿ ಸಾರಿಗೆ ಇಲಾಖೆಯ ವಿಚಾರ ಚರ್ಚೆಯಾಗಿದೆ. 3650 ಕೋಟಿ ಹೊರೆಯಾಗುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಸಭಾ ನಡಾವಳಿಗಳನ್ನು ಮುಂದಿಟ್ಟರು. ಶೇ 15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯು ನಿರ್ಣಯಿಸಿ, ಅದರಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು ಎಂದು ಮಾಹಿತಿ ಕೊಟ್ಟರು. ಹಾಲು, ಎಣ್ಣೆ, ವಾಹನ ತೆರಿಗೆ ಹೆಚ್ಚಳದ ಕುರಿತು ಗಮನ ಸೆಳೆದರು. ಪ್ರಯಾಣದರ ಪರಿಷ್ಕರಣೆ ನಂತರವೂ ನಿಗಮವು 1800 ಕೋಟಿ ನಷ್ಟ ಅನುಭವಿಸುತ್ತದೆ ಎಂದು ಸಭೆಯು ಗಮನಿಸಿತ್ತೆಂದು ತಿಳಿಸಿದರು.
 
ನಿಗಮದಲ್ಲಿ 200 ಎಕರೆ ಭೂಮಿ ಲಭ್ಯವಿದ್ದು, ಆದಾಯ ಕ್ರೋಡೀಕರಣಕ್ಕೆ ಬಳಸಲು ಮುಖ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ. ಸರಕಾರದ ಮುಂದೆ ಬೇಡಿಕೆ ಇಡಬೇಡಿ ಎಂಬುದು ಇದರ ಅರ್ಥ ಎಂದು ವಿಶ್ಲೇಷಿಸಿದರು.
 
ಈ ಸರಕಾರ ಇನ್ನು ಎರಡೂವರೆ ವರ್ಷ ಇರಲಿದೆ; ಇದು ನಿಗಮದ ಆಸ್ತಿ ಮಾರಾಟ ಮಾಡಿ, ಸರ್ವನಾಶ ಮಾಡಿದರೆ, ಆ ಬಳಿಕವೂ ಕರ್ನಾಟಕ ಇರುತ್ತದೆಯಲ್ಲವೇ? ರಾಜ್ಯದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳೂ ಇರುತ್ತಾರಲ್ಲವೇ? ಎರಡೂವರೆ ವರ್ಷಗಳ ಬಳಿಕ ಈ ರಾಜ್ಯದ ಸಾರಿಗೆ ಇಲಾಖೆ ಪರಿಸ್ಥಿತಿ ಏನಾದೀತು? ಸಾರ್ವಜನಿಕ ಸಾರಿಗೆ ಸ್ಥಿತಿ ಯಾವ ಹಂತಕ್ಕೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
 
1.05 ಲಕ್ಷ ಕೋಟಿ ಸಾಲ
ಈ ಸರಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಒಂದು ಲಕ್ಷದ 5 ಸಾವಿರ ಕೋಟಿ ಸಾಲ ಮಾಡಿ, ಅದರಲ್ಲಿ ಉತ್ಪಾದನೆ ಇಲ್ಲದೆ, ನಿಗಮಗಳಿಗೆ ಹಣ ಕೊಡಲಾಗದೆ ಈ ರಾಜ್ಯ ನಡೆಯುತ್ತಿದೆ. ಸರಕಾರವು ಸಾಲದ ಸುಳಿಯಲ್ಲಿದೆ ಎಂದು ಗಮನ ಸೆಳೆದರು. ಬೊಮ್ಮಾಯಿಯವರ ಸರಕಾರದಲ್ಲಿ ಈ ನಿಗಮಗಳಿಗೆ ಸಕಾಲದಲ್ಲಿ ಭವಿಷ್ಯನಿಧಿ ಮೊತ್ತ ಕೊಡಲಾಗಿತ್ತು ಎಂದು ವಿವರ ನೀಡಿದರು.
 
ಇದು ಕೊಲೆಗಾರರ ಸರಕಾರ
ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಕೊಲೆಗಡುಕರೇ ಹೆಚ್ಚಾಗಿದ್ದಾರೆ. ಇದು ಕೊಲೆಗಾರರ ಸರಕಾರ ಎನ್ನಲು ನೋವಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಕಲ್ಬುರ್ಗಿಯಲ್ಲಿ ಗುತ್ತಿಗೆದಾರ ಸಚಿನ್ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕುಟುಂಬದ ಜೊತೆ ಬಿಜೆಪಿ ನಿಲ್ಲಲಿದೆ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ; ಈ ಸರಕಾರ ಸಾವಿನ ಭಾಗ್ಯವನ್ನು ಕೊಟ್ಟಿದೆ ಎಂದು ಟೀಕಿಸಿದರು.
ಬಿಜೆಪಿ ಈ ಸಾವಿನ ಸಂಬಂಧ ರಾಜ್ಯಾದ್ಯಂತ ಹೋರಾಟವನ್ನು ಹೋರಾಟ ನಡೆಸಲಿದೆ. ನಾಳೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ದೆಹಲಿಯಿಂದ ಹಿಂತಿರುಗಿದ ಬಳಿಕ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments