Select Your Language

Notifications

webdunia
webdunia
webdunia
Friday, 25 April 2025
webdunia

ತಪ್ಪು ಕೇಸ್ ಹಾಕಿಸಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಗೋ.ಮಧುಸೂದನ್

BJP
ಬೆಂಗಳೂರು , ಶುಕ್ರವಾರ, 22 ಸೆಪ್ಟಂಬರ್ 2017 (18:52 IST)
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಮೇಲೆ ಎಸಿಬಿ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡುವ ಮೂಲಕ ಸರ್ಕಾರಕ್ಕೆ ತಪರಾಕಿ ಹಾಕಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಗೋ. ಮಧುಸೂದನ್ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಒಂದೇ ಪ್ರಕರಣಕ್ಕೆ ಎರಡು ಎಫ್ಐಆರ್ ಗಳನ್ನ ಎಸಿಬಿ ಹಾಕಿರುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಬಿಎಸ್ ವೈ ಮೇಲೆ ಇನ್ನೂ 25-30 ಎಫ್ಐಆರ್ ಹಾಕುವುದು ಎಸಿಬಿ ಉದ್ದೇಶವಾಗಿತ್ತು. ಶಿವರಾಂ ಕಾರಂತ್ ಬಡಾವಣೆಗೆ ನೋಟಿಫಿಕೇಶನ್ ಆಗಿದ್ದ ಭೂಮಿಯಲ್ಲಿ ಒಂದಿಂಚು ಭೂಮಿಯನ್ನ ಬಿಡಿಎ ಬಿಟ್ಟುಕೊಟ್ಟಿಲ್ಲ. ಹೀಗಾಗಿ ನೋಟಿಫೈ ಆಗಿದ್ದ ಭೂಮಿ ಡಿನೋಟಿಫೈ ಆಗಿಲ್ಲ. ಹಾಗಾಗಿ ಎಫ್ಐಆರ್ ಹಾಕಿರುವುದೇ ಕಾನೂನು ಬಾಹಿರ. ಎಬಿಸಿ ದೂರು ದಾಖಲಿಸಿಕೊಳ್ಳಲು ಅಧಿಕಾರವೇ ಇಲ್ಲ ಎಂದರು.

ಸಿದ್ದರಾಮಯ್ಯ ಕೈಯಲ್ಲಿ ಗೃಹ ಇಲಾಖೆ ಇದ್ದಾಗ ಈ ಪ್ರಕರಣ ದಾಖಲಿಸಲಾಗಿತ್ತು. ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡೋದನ್ನ ತಡೆಯುವುದು ಸಿಎಂ ಉದ್ದೇಶವಾಗಿತ್ತು. ಆದ್ರಿಂದ ಈಗ ಕೋರ್ಟ್ ತೀರ್ಪಿನಿಂದ ಸಿದ್ದರಾಮಯ್ಯರಿಗೆ ಮುಖಭಂಗವಾಗಿದೆ ಎಂದರು.

2008ರಲ್ಲಿ ನಮ್ಮ ಸರ್ಕಾರ ಬರುವ ಮೊದಲೇ ಪ್ರಿಲಿಮಿನರಿ ನೋಟಿಫಿಕೇಷನ್ ಆಗಿತ್ತು. ಈ ಬಡಾವಣೆಯ ಪ್ರಿಲಿಮಿನರಿ ನೋಟಿಫಿಕೇಷನ್ ಆದಾಗ ನಮ್ಮ ಸರ್ಕಾರ ಅಸ್ಥಿತ್ವದಲ್ಲೇ ಇರಲಿಲ್ಲ. ನಡೆಯದೇ ಇರುವ ಅಪರಾಧಕ್ಕೆ ಯಡಿಯೂರಪ್ಪ ಅವರ ವಿರುದ್ಧ ಎಸಿಬಿ ದೂರು ದಾಖಲಿಸಿಕೊಂಡಿದ್ದೇಕೆ. ಸಿಎಂ ಗೃಹ ಖಾತೆ ಇಟ್ಟುಕೊಂಡಿದ್ದಾಗ ಕೆಂಪಯ್ಯ ಕೊಟ್ಟ ಪ್ರತಿಗಳಿಗೆ ಸಹಿ ಮಾಡಿ ಕೇಸ್ ಗಳು ಹಾಕಿಸಿದಾಗ ಸಿದ್ದರಾಮಯ್ಯಗೆ ಯಡಿಯೂರಪ್ಪ ಅವರನ್ನ ರಾಜಕೀಯವಾಗಿ ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಸಿಎಂ ಈ ರೀತಿ ಯಡಿಯೂರಪ್ಪ ಅವರನ್ನ ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಮಾಡದ ಅಪರಾಧಕ್ಕೆ ಕೇಸ್ ಹಾಕಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾನು ರಾಜೀನಾಮೆ ನೀಡಲ್ಲ, ಫೆವಿಕಾಲ್ ಹಾಕಿಕೊಂಡು ಕುಳಿತಿದ್ದೇನೆ ಅನ್ನೋದಾದರೆ ವಿಧಾನಸೌಧದ ಕೆಂಗಲ್ ಪ್ರತಿಮೆ ಎದುರು ನಿಂತು ಯಡಿಯೂರಪ್ಪನವರ ಕ್ಷಮೆ ಕೇಳಿ. ಬಿಎಸ್ ವೈ ಬಳಿ ಕ್ಷಮೆ ಕೇಳೋದು ಅವಮಾನ ಎನಿಸಿದರೆ ಹೈಕೋರ್ಟ್ ಎದುರು ನಿಂತು ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಹಾಗೂ ಅವರ ಟೀಮ್ ಇದ್ದರೂ ಈ ಪ್ರಕರಣಕ್ಕಾಗಿ ರವಿವರ್ಮಕುಮಾರ್ ಅವರಿಗೆ ಸಂಬಳ ಕೊಟ್ಟು ಯಾಕೆ ಇಟ್ಟುಕೊಂಡಿದ್ದಾರೆ. ರವಿವರ್ಮ ಕುಮಾರ್ ಗೆ ಸಂಬಳ ಸಿದ್ದರಾಮಯ್ಯ ತಮ್ಮ ಜೇಬಿನಿಂದ ಕೊಡುತ್ತಿದ್ದಾರಾ? ಅಥವಾ ಸರ್ಕಾರದ ಖಜಾನೆಯಿಂದ ಕೊಡುತ್ತಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಗೆ ಪುಟ್ಟಸ್ವಾಮಿ ಪ್ರಶ್ನಿಸಿದ್ದಾರೆ.

ಇನ್ನು ಹೈಕೋರ್ಟ್ ನೀಡಿದ ಆದೇಶ ಕುರಿತು ಬಿಜೆಪಿ ಹೈಕಮಾಂಡ್ ಮಾಹಿತಿ ಪಡೆದಿದೆ. ಬಿಜೆಪಿ ಕಚೇರಿಗೆ ದೂರವಾಣಿ ಕರೆ ಮಾಡಿ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮಾಹಿತಿ ಪಡೆದಿದ್ದಾರೆ. ಗೋ.ಮಧುಸೂದನ್ ಗೆ ದೂರವಾಣಿ ಕರೆ ಮಾಡಿದ್ದ ಜಾವಡೇಕರ್, ಪ್ರಕರಣದಲ್ಲಿ ಸರ್ಕಾರ ಕೈಗೊಂಡ ಕಾನೂನು ಕ್ರಮ ಮತ್ತು ನ್ಯಾಯಾಲಯದಲ್ಲಿ ಬಿಎಸ್ ವೈ ಪರ ವಾದಿಸಿದ ಅಂಶಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚಾರಣೆಗೆ ಹಾಜರಾಗಲು ಯಡಿಯೂರಪ್ಪಗೆ ಪೊಲೀಸರಿಂದ ನೊಟಿಸ್ ಜಾರಿ