Publish Date: Mon, 23 Apr 2018 (19:02 IST)
Updated Date: Mon, 23 Apr 2018 (19:03 IST)
ಕಲಘಟಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಎಂ.ನಿಂಬಣ್ಣವರ್ ನಾಮಪತ್ರ ಸಲ್ಲಿಸಲು ತೆರಳುವಾಗ ಕುಸಿದು ಬಿದ್ದ ಘಟನೆ ಕಲಘಟಗಿ ತಹಶೀಲ್ದಾರರ ಕಛೇರಿ ಬಳಿ ನಡೆದಿದೆ.
ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರ ಕೈತಪ್ಪಿ ಟಿಕೆಟ್ ಮಹೇಶ ಟೆಂಗಿನಕಾಯಿಯವರ ಪಾಲಾಗಿತ್ತು. ಇದರಿಂದ ಹಲವು ಬಾರಿ ಪ್ರತಿಭಟನೆ ನಡೆಸಿದ ಬೆಂಬಲಿಗರು ನಿಂಬಣ್ಣವರ್ ಅವರನ್ನು ಬಂಡಾಯವಾಗಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಬೆಂಬಲಿಗರ ಒತ್ತಾಯಕ್ಕೆ ಮಣಿದ ನಿಂಬಣ್ಣವರ್ ಕಲಘಟಗಿ ಪಟ್ಟಣದ ಪ್ರಮುಖ ರಸ್ತೆ ಮೂಲಕ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದರು. ನಾಮಪತ್ರ ಸಲ್ಲಿಕೆ ಮಾಡಲು ಹೊರಟ ಚಕ್ಕಡಿಯಲ್ಲಿಯೇ ಕುಸಿದು ಬಿದ್ದರು.
ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಬೆಂಬಲಿಗರು ಪ್ರಥಮ ಚಿಕಿತ್ಸೆ ನೀಡಿದರು. ಘಟನೆಗೆ ಲೋ ಬಿಪಿ ಕಾರಣ ಎನ್ನಲಾಗಿದೆ. ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಾಮಪತ್ರ ಸಲ್ಲಿಸಿದರು.