ಬೀದರ್: ಮೈಸೂರು ಮುಡಾ ಹಗರಣದ ವಿಷಯ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಮುಖ್ಯಮಂತ್ರಿಯವರು ಹಗರಣ ಆಗಿಲ್ಲ; ಅಕ್ರಮ ನಡೆದಿಲ್ಲ ಎಂದಿದ್ದರು. ನಮ್ಮ ಪಾದಯಾತ್ರೆ ಬಳಿಕ ಸಿಎಂ ಸ್ಥಾನಕ್ಕೆ ಕುತ್ತು ಬರುವ ಭಯದಿಂದ 14 ನಿವೇಶನ ವಾಪಸ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೀದರ್‍ನಲ್ಲಿ ಇಂದು ವಕ್ಫ್ ಸಂಬಂಧಿತ ಹೋರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಡಾದಲ್ಲಿನ ತಮ್ಮ ಪತ್ನಿಯ 14 ನಿವೇಶನ ವಾಪಸ್ ಕೊಡಲು 62 ಕೋಟಿ ಕೊಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದರು. ಬಿಜೆಪಿ ಹೋರಾಟದ ಫಲವಾಗಿ ಒಂದು ರೂಪಾಯಿ ಪಡೆಯದೆ ಅಕ್ರಮ ಸೈಟ್‍ಗಳನ್ನು ವಾಪಸ್ ಕೊಡಲು ಸಿಎಂ ಪತ್ನಿ ಪತ್ರ ಬರೆದಿದ್ದಾರೆ ಎಂದರಲ್ಲದೆ, ಭ್ರಷ್ಟ, ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದ್ದು, ಜನರಿಗೆ ನ್ಯಾಯ ಕೊಡಲು ಮುಂದಾಗಿದ್ದೇವೆ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಆದೇಶದ ಮೇರೆಗೆ ರೈತರ ಜಮೀನಿನ ಹೆಸರನ್ನು ವಕ್ಫ್ ಎಂದು ಮಾಡಲು ಸೂಚಿಸಿದ್ದರು ಎಂದು ವಿವರಿಸಿದರಲ್ಲದೆ, ಯಾತಕ್ಕೋಸ್ಕರ ನಿಮಗೆ ರೈತರು, ಹಿಂದೂಗಳ ಮೇಲೆ ಸಿಟ್ಟು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ದೇವಾಲಯಕ್ಕೂ ಇಂಥ ನೋಟಿಸ್ ಬಂದಿದೆ. ಗ್ರಾಮಕ್ಕೆ ಗ್ರಾಮವನ್ನೇ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ತಲೆತಲಾಂತರದಿಂದ ವ್ಯವಸಾಯ ಮಾಡುವ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ದೇಶದ ಜನರು, ರಾಜ್ಯದ ಜನತೆಗೆ ತುತ್ತು ಅನ್ನ ಕೊಡುವ ರೈತರು ಬೀದಿಗೆ ಬರುವಂತೆ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅಲ್ಪಸಂಖ್ಯಾತರ ಸಿಎಂ ಎಂಬಂತೆ ಸಿದ್ದರಾಮಯ್ಯನವರು ವರ್ತಿಸುತ್ತಿದ್ದು, ಇವರಿಗೆ ತಕ್ಕ ಉತ್ತರ ಕೊಡಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದರು. ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ಮತ್ತು ನಮ್ಮೆಲ್ಲ ನಾಯಕರು ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಅಧಿಕಾರದ ದರ್ಪ, ಮದದಿಂದ ಮೆರೆಯುವ, ರೈತರ ಕಣ್ಣಲ್ಲಿ ನೀರು ತರುವ ಈ ಸರಕಾರವು ರೈತರ ಪರವಾಗಿಲ್ಲ. ಬಿಜೆಪಿ ನಿಮ್ಮ ಪರವಾಗಿ ಹೋರಾಟ ಮಾಡಲಿದೆ. ರೈತರ ಪರವಾಗಿ ಹೋರಾಟ ಮಾಡಿ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು. ಅಧಿಕಾರ ಶಾಶ್ವತವಲ್ಲ; ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಲ್ಲದಿದ್ದರೂ ರೈತಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ರೈತರು ವಕ್ಫ್ ಕಾಯ್ದೆಯಿಂದ ಆತಂಕ ಪಡಬೇಕಿಲ್ಲ; ಬಿಜೆಪಿ ನಿಮ್ಮ ಪರವಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಕೊಡಲಾಗುವುದು ಎಂದು ಪ್ರಕಟಿಸಿದರು. ನಮ್ಮ ಭೂಮಿ ನಮ್ಮ ಹಕ್ಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಸಿದ್ದರಾಮಯ್ಯರ ಸರಕಾರವು ದುರ್ಬಳಕೆ ಮಾಡಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಹೋರಾಟವನ್ನೂ ಮಾಡಿದ್ದೇವೆ ಎಂದು ವಿವರಿಸಿದರು. ಹಣ ದೋಚಿ, ಪರಿಶಿಷ್ಟರಿಗೆ ಮೀಸಲಿಟ್ಟ ಹಣ ದುರ್ಬಳಕೆ ಸಂಬಂಧ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದೆವು ಎಂದರು.
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿಲ್ಲ ಎಂದು ಮುಖ್ಯಮಂತ್ರಿ ಆರಂಭದಲ್ಲಿ ತಿಳಿಸಿದ್ದರು. ಬಿಜೆಪಿ ಹೋರಾಟ ಮಾಡಿದ ಬಳಿಕ ಸಿದ್ದರಾಮಯ್ಯನವರು ಹಗರಣ ನಡೆದುದನ್ನು ಸದನದಲ್ಲೇ ಒಪ್ಪಿ, 187 ಕೋಟಿ ಅಲ್ಲ; 87 ಕೋಟಿಯ ಹಗರಣ ಆದುದನ್ನು ಒಪ್ಪಿಕೊಂಡರು. ಸಚಿವರು ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ಇದು ಬಿಜೆಪಿ ಹೋರಾಟದ ಫಲ ಎಂದು ತಿಳಿಸಿದರು.