ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕಿಡಿ ಕಾರುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸೇರುತ್ತಾರಾ? ಈ ಪ್ರಶ್ನೆಗೆ ಇಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಉತ್ತರಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳಾಗಿವೆ. ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಬಣ ಕಟ್ಟಿಕೊಂಡು ಬಹಿರಂಗವಾಗಿಯೇ ಆರೋಪಗಳನ್ನು ಹೊರಿಸುತ್ತಿದ್ದಾರೆ. ಇದಕ್ಕೆ ವಿಜಯೇಂದ್ರ ಬಣದಿಂದಲೂ ಪ್ರತ್ಯುತ್ತರ ಸಿಗುತ್ತಿದೆ. ಈ ನಡುವೆ ವಿಜಯೇಂದ್ರ ವಿರುದ್ಧ ಮುನಿಸಿಗೆ ಯತ್ನಾಳ್ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆ ಹಲವರಿಗಿದೆ.
ಈ ಬಗ್ಗೆ ಇಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಪ್ರತಿಕ್ರಿಯಿಸಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಗೆ ಕಾಂಗ್ರೆಸ್ ಪಕ್ಷದ ತತ್ವಗಳು ಹೊಂದಾಣಿಕೆಯಿಲ್ಲ. ಎಐಸಿಸಿ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರನ್ನೂ ನಿಂದಿಸುವ ಅವರು ಕಾಂಗ್ರೆಸ್ ಸೇರುವುದು ಸಾಧ್ಯವೇ? ಕಾಂಗ್ರೆಸ್ ಸಿದ್ಧಾಂತಗಳು ಅವರಿಗೆ ಆಗಿ ಬರೋಲ್ಲ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಪಕ್ಕಾ ಹಿಂದುತ್ವ ಪ್ರತಿಪಾದಿಸುವ ನಾಯಕ. ಅವರಿಗೆ ಸಮಾಜವಾದೀ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಸರಿಬರಲ್ಲ. ಹೀಗಾಗಿ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಇದೀಗ ಬಿಜೆಪಿ ಹೈಕಮಾಂಡ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದು ನಾಳೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ.