Publish Date: Fri, 18 Aug 2023 (09:26 IST)
Updated Date: Fri, 18 Aug 2023 (09:54 IST)
ಬೆಂಗಳೂರು : ಬಿಜೆಪಿಯಿಂದ ಯಾರೇ ಶಾಸಕರು ಕಾಂಗ್ರೆಸ್ಗೆ ಬಂದರೂ ನಾವು ವಿರೋಧ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪರೋಕ್ಷ ಸುಳಿವು ಕೊಟ್ಟಿದ್ದಾರೆ. ಸೋಮಶೇಖರ್ ಅವರನ್ನು ನಾನು ಸಂಪರ್ಕ ಮಾಡಿಲ್ಲ. ಆದರೆ ಅವರು ಕಾಂಗ್ರೆಸ್ಗೆ ದುಡಿದವರು. ನಾನು ಕಾಂಗ್ರೆಸ್ ಅಧ್ಯಕ್ಷ ಆಗಿದ್ದಾಗ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿದ್ದೆ. ಆಗ ಒಳ್ಳೆಯ ಕೆಲಸ ಮಾಡಿದ್ದರು. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಅವರನ್ನು ಕಾಂಗ್ರೆಸ್ ಪಕ್ಷವೂ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿತ್ತು. 3 ಬಾರಿ ಕಾಂಗ್ರೆಸ್ನಿಂದ ಶಾಸಕರಾಗಿದ್ದರು. ಅವರು ನಮ್ಮಲ್ಲಿ ಇದ್ದಿದ್ದರೆ ಸಚಿವ ಸ್ಥಾನ ಸಿಗಬಹುದಿತ್ತೇನೋ? ಈಗ ಇರುವ ಪಕ್ಷದಲ್ಲಿ ಬೇಸರ ಆಗಿದೆ ಎನ್ನುವ ಮಾತುಗಳನ್ನು ಅನೇಕ ಬಾರಿ ಹೇಳಿದ್ದಾರೆ. ಪಕ್ಷಕ್ಕೆ ವಾಪಸ್ ಬರುವುದಾಗಿ ನಮ್ಮ ಅಧ್ಯಕ್ಷರ ಜೊತೆ ಸಂಪರ್ಕ ಮಾಡಿದರೆ ನಾವೆಲ್ಲ ಒಪ್ಪುತ್ತೇವೆ. ಅವರು ಪಕ್ಷಕ್ಕೆ ವಾಪಸ್ ಆಗುವುದನ್ನು ವಿರೋಧ ಮಾಡುವುದಿಲ್ಲ ಎಂದಿದ್ದಾರೆ.