Publish Date: Mon, 05 Jan 2026 (15:40 IST)
Updated Date: Mon, 05 Jan 2026 (15:44 IST)
ಬೀದರ್: ಇಲ್ಲಿ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರು ಪರಸ್ಪರ ಕೈ ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಘಟನೆ ವರದಿಯಾಗಿದೆ.
ಈ ಘಟನೆಯಿಂದ ಕೆಲಕಾಲ ಗೊದ್ದಲದ ವಾತಾವರಣ ನಿರ್ಮಾಣವಾಯಿತು, ಬಳಿಕ ಸಭೆಯನ್ನೇ ಮುಂದೂಡಲಾಯಿತು.
ಹುಮನಾಬಾದ್ ಮತ ಕ್ಷೇತ್ರದ ಅರಣ್ಯ ಜಮೀನಿನ ಕುರಿತು ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಡಾ. ಸಿದ್ದಲಿಂಗಪ್ಪ ಪಾಟೀಲ ಹಾಗೂ ಭೀಮರಾವ್ ಪಾಟೀಲ್ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡಿದರು.
ಸಿದ್ದಲಿಂಗಪ್ಪ ಪಾಟೀಲ್ ಅವರು ಮಾತನಾಡುವಾಗ ಅದನ್ನು ಬಲವಾಗಿ ವಿರೋಧಿಸುತ್ತ ಬಂದ ಭೀಮರಾವ್ ಪಾಟೀಲ್ ಅವರು ಸಿದ್ದಲಿಂಗಪ್ಪ ಪಾಟೀಲ್ ಕಡೆಗೆ ತೆರಳಿದರು.
ಕೈಕೈ ಮಿಲಾಯಿಸಿದ ಇವರು ಜೋರು ಧ್ವನಿಯಲ್ಲಿ ಒಬ್ಬರನೊಬ್ಬರು ನಿಂದಿಸಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಾಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿದರು.
ಆನಂತರ ಅಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ವೇದಿಕೆಯಿಂದ ಕೆಳಗಿಳಿದು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಆನಂತರ ಅನಿರ್ದಿಷ್ಟ ಅವಧಿಗೆ ಸಭೆ ಮುಂದೂಡಲಾಗಿದೆ ಎಂದು ಘೋಷಿಸಲಾಯಿತು. ಯಾವುದೇ ರೀತಿಯ ಚರ್ಚೆಯಿಲ್ಲದೇ ಸಭೆ ಮೊಟಕುಗೊಂಡಿತು.