ಬೆಂಗಳೂರು: ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಎಂದು ಸದನದಲ್ಲೇ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕೇಳಿದ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಫೆಬ್ರವರಿ, ಮಾರ್ಚ್ ತಿಂಗಳದ್ದು ಬ್ಯಾಲೆನ್ಸ್ ಇಟ್ಟಿದ್ದೀರಿ. ಆಗಸ್ಟ್ ವರೆಗೆ ಹಾಕಿದ್ದೀರಿ ಅಂತೀರಿ. ಹಾಕಿದ್ದರೆ ಸೆಪ್ಟೆಂಬರ್, ಅಕ್ಟೋಬರ್, ನವಂಬರ್ ನದ್ದು ಯಾಕೆ ಬಾಕಿ ಇಟ್ಟಿದ್ದೀರಿ ಎಂದೂ ತಿಳಿಸಿ ಎಂದು ಮಹೇಶ್ ಟೆಂಗಿನಕಾಯಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾವು ಪ್ರತೀ ತಿಂಗಳೂ ಕೂಡಾ ಫೈನಾನ್ಸ್ ಡಿಪಾರ್ಟ್ ಮೆಂಟ್ ಗೆ ಫೈಲ್ ಕಳುಹಿಸ್ತೀವಿ. ಇದುವರೆಗೆ ಎಲ್ಲವೂ ಚೆನ್ನಾಗಿ ನಿಭಾಯಿಸಿಕೊಂಡು ಹೋಗಿದ್ದೇವೆ. ಫಿನಾನ್ಸ್ ಡಿಪಾರ್ಟ್ ಮೆಂಟ್ ನಮಗೆ ಕೊಡ್ತಾರೆ, ಒಂದು ನಿಮಿಷ ತಡಮಾಡದೇ ಹಾಕಿದ್ದೇವೆ.
ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಯಾಕೆ ಕೊಟ್ಟಿಲ್ಲ ಅದನ್ನು ಮೊದಲು ಹೇಳ್ರೀ ಎಂದು ಶಾಸಕರು ಕೇಳಿದಾಗ, ಸಚಿವೆ ಹೆಬ್ಬಾಳ್ಕರ್ ಮಹಾರಾಷ್ಟ್ರದ ಉದಾಹರಣೆ ಎಳೆದು ತಂದರು. ಆಗ ಬಿಜೆಪಿ ಶಾಸಕರು, ನಮಗೆ ಬೇರೆ ರಾಜ್ಯದ ಉದಾಹರಣೆ ಬೇಕಾಗಿಲ್ಲ. ಅಲ್ಲಿನದ್ದು ಅವರು ನೋಡಿಕೊಳ್ಳುತ್ತಾರೆ. ಇಲ್ಲಿನ ವಿಚಾರ ಹೇಳ್ರೀ ಎಂದರು.
ಆಗ ರೊಚ್ಚಿಗೆದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಯೋಜನೆಯಿಂದ ಎಷ್ಟು ಮಹಿಳೆಯರಿಗೆ ಅನುಕೂಲವಾಗಿದೆ ಎಂಬ ಬಗ್ಗೆ ನಿಮಗೇನಾದರೂ ಮಾಹಿತಿ ಇದೆಯಾ? ಈ ಯೋಜನೆಯನ್ನು ವಿರೋಧಿಸಿದವರು ನೀವು. ಈಗ ಇದ್ದಕ್ಕಿದ್ದಂತೆ ಮಹಿಳೆಯರ ಬಗ್ಗೆ ಕಾಳಜಿ ಬಂದು ಬಿಡ್ತಾ ಎಂದು ತಿರುಗೇಟು ನೀಡಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲವೇರ್ಪಟ್ಟಿತು. ಬಳಿಕ ಸ್ಪೀಕರ್ ಮಧ್ಯಪ್ರವೇಶಿಸಿ ತಣ್ಣಗಾಗಿಸಿದರು.