Publish Date: Fri, 22 Mar 2024 (15:03 IST)
Updated Date: Fri, 22 Mar 2024 (15:06 IST)
ಬೆಂಗಳೂರು: ಪತ್ನಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ನಡೆಸುತ್ತಿರುವ ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಜನರ ಬಳಿ ಹೋಗಿ ಬಿರುಸಿನಿಂದ ಮತಬೇಟೆ ಮಾಡುತ್ತಿದ್ದಾರೆ. ಆದರೆ ಈ ನಡುವೆ ಬಿಜೆಪಿ ಅವರ ವಿರುದ್ಧ ದೂರು ನೀಡಿದೆ.
ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಶಿವರಾಜ್ ಕುಮಾರ್ ಪತ್ನಿ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದರಿಂದ ಅವರು ನಟಿಸಿರುವ ಸಿನಿಮಾ, ಜಾಹೀರಾತುಗಳನ್ನು ಸದ್ಯದ ಮಟ್ಟಿಗೆ ನಿಷೇಧ ಮಾಡಬೇಕು. ಯಾವುದನ್ನೂ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸಿದೆ.
ಪತ್ನಿ ಗೀತಾಗೆ ಬೆಂಬಲ ನೀಡಿರುವ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಕಾಂಗ್ರೆಸ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಸಿನಿಮಾಗಳ ಮೇಲೂ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸಲಾಗಿದೆ.