Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ನಾವು ರೆಸ್ಟ್ ಮಾಡಲ್ಲ: ಬಿಜೆಪಿ

Karnataka BJP

Krishnaveni K

ಬೆಂಗಳೂರು , ಗುರುವಾರ, 22 ಆಗಸ್ಟ್ 2024 (13:57 IST)
ಬೆಂಗಳೂರು: ದಲಿತರ ವಿರುದ್ಧ ಕಾಂಗ್ರೆಸ್ ಪಕ್ಷದ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಡೆದ ಬಿಜೆಪಿಯ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ದಲಿತ ಮುಖಂಡರಿಗೂ ಧಿಕ್ಕಾರವಿರಲಿ. ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು.

ನಾನು ಹಿಂದುಳಿದ ವರ್ಗದ ನಾಯಕ. ಆದ್ದರಿಂದಲೇ ನನಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಈ ದೇಶದ ಪ್ರಧಾನಮಂತ್ರಿ ಯಾರು? ಅವರು ಕೂಡ ಹಿಂದುಳಿದವರು. ಅವರು ನಿಮ್ಮ ಥರ ಕರಿಕಾಗೆ ಅಲ್ಲ. ಅವರು ಕಳಂಕವೇ ಇಲ್ಲದವರು ಎಂದು ವಿವರಿಸಿದರು.

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ಪ್ರಕಟಿಸಿದ ಅವರು, ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಾವು ವಿರಮಿಸುವುದಿಲ್ಲ. ನಾವು ಹೋರಾಟದಿಂದ ವಿರಮಿಸುವುದಿಲ್ಲ ಎಂದು ತಿಳಿಸಿದರು.
 
ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ?
ಸರಕಾರಿ ಜಮೀನನ್ನು ನೀವು ಖರೀದಿಸಿದ್ದೀರಲ್ಲವೇ? ನಿಮ್ಮ ಮಂಡೆಯಲ್ಲಿ ಬುದ್ಧಿ ಉಂಟಾ ಮಾರಾಯರೇ? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿದರು.
ನಿಮ್ಮ ಮಂಡೆಯಲ್ಲಿ ಬುದ್ಧಿ ಇಲ್ಲ. ಹುಲಿಯಾ ಎಂದಾಗ ಖುಷಿ ಪಡುತ್ತಿದ್ದ ನೀವೀಗ ಕರಿಯ ಆಗಿ ಕೂತಿದ್ದೀರಲ್ಲಾ ಎಂದು ಕೇಳಿದರು. ಎಷ್ಟು ವೈಟ್ನರ್ ಹಾಕಿದ್ರೂ ಬಿಳಿ ಆಗೋದಿಲ್ಲ ಮಾರಾಯರೇ. ದಯವಿಟ್ಟು ರಾಜೀನಾಮೆ ಕೊಟ್ಟು ಹೋಗಿಬಿಡಿ ಎಂದರು.
 
ಇಡೀ ರಾಜ್ಯ ಸಿದ್ದರಾಮಯ್ಯನವರ ವಿರುದ್ಧ ಇದೆ. ದಲಿತರಿಗೆ ಮೀಸಲಿಟ್ಟ ಹಣ ವರ್ಗಾವಣೆ ಪ್ರಕರಣ, ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ- ಇವೆಲ್ಲವೂ ದಲಿತ ಸಮುದಾಯಕ್ಕೆ ಸೇರಿದ ವಿಚಾರಗಳು. ಕಾಂಗ್ರೆಸ್ ಪಕ್ಷ ದಲಿತರ ಸಮಾಧಿ ಮಾಡುತ್ತಿದ್ದರೆ ಸ್ವಾಮೀಜಿಗಳು ಆ ಸಮಾಧಿ ಮೇಲೆ ಕುಳಿತು ಅವರಿಗೆ ಬೆಂಬಲ ಕೊಡುವುದು ಸರಿಯೇ ಎಂದು ಕೇಳಿದರು.
 
ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಲಿ: ಡಾ.ಅಶ್ವತ್ಥನಾರಾಯಣ್

ಜನಹಿತ, ರಾಜ್ಯದ ಹಿತ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದರು. ಭ್ರಷ್ಟ ಸರಕಾರದ ವಿರುದ್ಧ ನಾವು ಜನಜಾಗೃತಿ ಮೂಡಿಸಬೇಕು. ಪ್ರತಿನಿತ್ಯ ಹೋರಾಟ ಮಾಡುವುದೇ ನಮ್ಮ ಕರ್ತವ್ಯವಾಗಿದೆ ಎಂದು ವಿಶ್ಲೇಷಿಸಿದರು.
ಲೂಟಿ ಹೊಡೆಯುವುದೇ ಕಾಂಗ್ರೆಸ್ ಸರಕಾರದ ನೀತಿಯಾಗಿದೆ ಎಂದು ಟೀಕಿಸಿದ ಅವರು, ಸಾಕ್ಷಿ ಸಮೇತ ಹಿಡಿದರೂ ಇವರು ರಾಜೀನಾಮೆ ಕೊಡುವುದಿಲ್ಲ. ಜನರ ಭಾವನೆಯನ್ನು ಇವರು ಗೌರವಿಸುವುದಿಲ್ಲ. ಕುರ್ಚಿಗೆ ಅಂಟಿಕೊಂಡೇ ಇರುವ ಭಂಡತನ ಇವರದು ಎಂದು ಟೀಕಿಸಿದರು.

ಇವರು ಸಂವಿಧಾನ ಕೈಯಲ್ಲಿ ಹಿಡಿದು ಹಕ್ಕುಗಳ ಮಾತನಾಡುತ್ತಾರೆ. ಆದರೆ, ತಮ್ಮ ಕರ್ತವ್ಯ, ಜವಾಬ್ದಾರಿಗಳ ಕುರಿತು ಮಾತನಾಡುವುದಿಲ್ಲ. ಸಂವಿಧಾನದ ಆಶಯಗಳನ್ನು ಗೌರವಿಸುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇವರಿಗೆ ಮದ ಬಂದಿದೆ; ದುರಹಂಕಾರ ಹೆಚ್ಚಾಗಿದೆ. ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಿಸುವುದಾಗಿ ಹೇಳುತ್ತಾರೆ. ನಾಲಾಯಕ್ ಗವರ್ನರ್ ಎನ್ನುತ್ತಾರೆ. ರಾಜಭವನಕ್ಕೆ ನುಗ್ಗಿ ಹಲ್ಲೆ ಮಾಡುವುದಾಗಿ ಹೇಳುತ್ತಾರೆ ಎಂದು ಖಂಡಿಸಿದರು.
 
ಸಿಬಿಐ ತನಿಖೆಗೆ ಎನ್.ರವಿಕುಮಾರ್ ಒತ್ತಾಯ
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಧಮ್ಮಿದ್ದರೆ, ತಾಕತ್ತಿದ್ದರೆ ಹಗರಣಗಳ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು. ವೈಟ್ನರ್ ಹಚ್ಚಿದ್ದು ತಮ್ಮ ಸರಕಾರದ ಅವಧಿಯಲ್ಲಿ ಅಲ್ಲ ಎಂದು ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳಬೇಕು ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.
ವಿಜಯನಗರ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೊಡಿ ಎಂದು ಬರೆದುದಕ್ಕೆ ವೈಟ್ನರ್ (ಬಿಳಿ ಬಣ್ಣ) ಹಚ್ಚಿದ್ದಾರೆ. ಸಿದ್ದರಾಮಯ್ಯ ಸುಳ್ಳು ರಾಮಯ್ಯ ಎಂದು ಟೀಕಿಸಿದರು.
 
ಕಳ್ಳ ತಾನು ಕಳ್ಳನೆನ್ನಲು ಸಾಧ್ಯವೇ- ಭಾರತಿ ಶೆಟ್ಟಿ
ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರು ಮಾತನಾಡಿ, ಕಾಂಗ್ರೆಸ್ಸಿಗರು, ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಕಳ್ಳರು, ಭ್ರಷ್ಟಾಚಾರ ಮಾಡಿದವರು. ಆದರೆ, ಯಾರು ಸ್ವಾಮೀ ತಾವು ಹಾಗೆಂದು ಒಪ್ಪಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್ ಗೋಪಿ ನೀಡಿದ ಪತ್ರ ಬಿಸಾಕಿದ ಅಮಿತ್ ಶಾ: ಸಿನಿಮಾಗಾಗಿ ಕೇಂದ್ರ ಸಚಿವ ಸ್ಥಾನ ಬಿಡಲೂ ಸಿದ್ಧ ಎಂದ ನಟ