Publish Date: Mon, 19 Jan 2026 (10:42 IST)
Updated Date: Mon, 19 Jan 2026 (10:45 IST)
ನವದೆಹಲಿ: ಹೈಕಮಾಂಡ್ ಭೇಟಿಗಾಗಿ ದಾವೋಸ್ ನಲ್ಲಿ ವರ್ಲ್ಡ್ ಎಕಾನಾಮಿಕ್ ಸಮ್ಮೇಳನಕ್ಕೆ ಗೈರಾದ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಕಡು ಟೀಕೆ ಮಾಡಿದೆ.
ರಾಜ್ಯದಲ್ಲಿ ನಾಯಕತ್ವ ವಿಚಾರವಾಗಿ ಗೊಂದಲವಿದೆ ಎನ್ನಲಾಗಿದೆ. ಇದರ ನಡುವೆ ಡಿಕೆ ಶಿವಕುಮಾರ್ ಮೊನ್ನೆ ದೆಹಲಿಗೆ ತೆರಳಿದ್ದರು. ಅಸ್ಸಾಂ ಚುನಾವಣೆ ನಿಮಿತ್ತ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ಅವರು ದೆಹಲಿಗೆ ತೆರಳಿದ್ದರು. ಇದೇ ವೇಳೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿ ಮಾಡಿ ರಾಜ್ಯದ ನಾಯಕತ್ವ ಗೊಂದಲದ ಬಗ್ಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಆದರೆ ಇದೇ ವೇಳೆ ದಾವೋಸ್ ನಲ್ಲಿ ಆರ್ಥಿಕ ಸಮ್ಮೇಳನವಿತ್ತು. ಡಿಕೆ ಶಿವಕುಮಾರ್ ಕರ್ನಾಟಕದ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗಿಯಾಗಬೇಕಿತ್ತು. ಆದರೆ ಹೈಕಮಾಂಡ್ ನಾಯಕರ ಭೇಟಿಗಾಗಿ ದಾವೋಸ್ ಪ್ರವಾಸ ರದ್ದು ಮಾಡಿದ್ದರು.
ಇದರಿಂದ ಕರ್ನಾಟಕಕ್ಕೆ ಭಾರೀ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ನಾವು ದೇಶ ಮೊದಲು, ಪಕ್ಷ ನಂತರ ಎಂದು ನಂಬಿದ್ದೇವೆ. ಆದರೆ ಕಾಂಗ್ರೆಸ್ ಗೆ ಯಾವಾಗಲೂ ಪಕ್ಷ ಮೊದಲು ದೇಶ ನಂತರ. ದಾವೋಸ್ ಸಮ್ಮೇಳನ ನಮ್ಮ ರಾಜ್ಯಕ್ಕೆ ಜಾಗತಿಕ ಹೂಡಿಕೆದಾರರನ್ನು ಸೆಳೆಯಲು ಉತ್ತಮ ಅವಕಾಶವಾಗಿತ್ತು. ಆದರೆ ಡಿಕೆ ಶಿವಕುಮಾರ್ ಇಂತಹ ಪ್ರಮುಖ ಸಮ್ಮೇಳನಕ್ಕೆ ಗೈರಾಗಿ ರಾಜ್ಯಕ್ಕೆ ದೊಡ್ಡ ನಷ್ಟವುಂಟು ಮಾಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.