ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಗಳನ್ನು ಖರೀದಿಸಿದ್ದಾರೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಆರೋಪ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ.
ಇಂದು ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಮಾಜಿ ಎಂಎಲ್‌ಸಿ ಮತ್ತು ಮುಖ್ಯ ವಕ್ತಾರ ಸಿ.ಎನ್. ಅಶ್ವತ್ಥ ನಾರಾಯಣ್, ಮಾಜಿ ಎಂಎಲ್‌ಸಿಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ್ ಮತ್ತು ರಾಜ್ಯ ಕಾನೂನು ಕೋಶದ ಸಂಚಾಲಕ ವಸಂತ ಕುಮಾರ್ ತೆರಳಿ ದೂರನ್ನು ನೀಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ 7 ಕೋಟಿ ರೂ. ಹಂಚಬೇಕೆಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿರುವ ವಿಡಿಯೋ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಇಬ್ರಾಹಿಂ ಅವರು ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುವಾಗ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.
ಭಾಷಣದಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಾನು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಚಿಮ್ಮನಕಟ್ಟಿ 3,000 ಮತಗಳನ್ನು ಖರೀದಿಸಿದ್ದೇವೆ ಎಂದು ಹೇಳಿದ್ದರು. ಈ ವಿಡಿಯೋ ಭಾರೀ ವೈರಲ್ ಆಯಿತು.