Publish Date: Sat, 21 Feb 2026 (17:30 IST)
Updated Date: Sat, 21 Feb 2026 (17:34 IST)
ಗದಗ: ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಬೈರತಿ ಬಸವರಾಜ್ ಅವರು ಜೈಲು ಸೇರಿದ ಬೆನ್ನಲ್ಲೇ ಇದೀಗ ಬಿಜೆಪಿ ಮತ್ತೊಬ್ಬ ಶಾಸಕನನ್ನು ಅರೆಸ್ಟ್ ಮಾಡಲಾಗಿದೆ.
ಕಮಿಷನ್ ರೂಪದಲ್ಲಿ ಗುತ್ತಿಗೆದಾರನಿಂದ ₹5ಲಕ್ಷವನ್ನು ಪಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕ ಡಾ.ಚಂದ್ರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಇಂದು ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡ ಆಗಿದ್ದು ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನ ಆಸ್ಪತ್ರೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನೂ ಅಧಿಕೃತ ಹೇಳಿಕೆಯ ಪ್ರಕಾರ, ರಸ್ತೆಯ ಎರಡೂ ಬದಿಗೆ ತಡೆಗೋಡೆ ನಿರ್ಮಿಸುವ ಕೆಲಸವನ್ನು ಗದಗದ ಚಿಂಚೋಳಿಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಪೂಜಾರ್ ಅವರಿಂದ ಚಂದ್ರು ಲಮಾಣಿ 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಈ ಬಗ್ಗೆ ದೂರುದಾರರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಆರೋಪಿಗಳನ್ನು ₹5 ಲಕ್ಷ ಪಡೆಯುವಾಗ ಅರೆಸ್ಟ್ ಮಾಡಿದ್ದಾರೆ.