Publish Date: Thu, 15 Sep 2022 (17:12 IST)
Updated Date: Thu, 15 Sep 2022 (17:15 IST)
ಕಾರಾಗೃಹಗಳು ಅಪರಾಧ ಎಸಗಿದ ವ್ಯಕ್ತಿಗಳ ಮನಃ ಪರಿವರ್ತನೆಯ ತಾಣಗಳಾಗಬೇಕು. ಆದರೆ, ಅಪರಾಧಿಗಳ ಮೋಜು ಮಸ್ತಿಯ ತಾಣಗಳಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಕೊಲೆ ಆರೋಪಿಯೊಬ್ಬ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಕೇಕ್ ಕಟ್ ಮಾಡುವ ಪೋಟೋಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಪೋಸ್ಟ್ ಮಾಡುವ ಮೂಲಕ ಜೈಲಿನ ಉಳುಕುಗಳನ್ನು ಬಯಲು ಮಾಡಿದ್ದಾನೆ.
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದವರು ಹುಟ್ಟುಹಬ್ಬ ಆಚರಿಸಿಕೊಂಡು ಫೇಸ್‌ಬುಕ್‌ನಲ್ಲಿ ಫೋಟೊ ಪೋಸ್ಟ್ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಬೆಳ್ಳಂ ಬೆಳಗ್ಗೆಯೇ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ಪೋಲಿಸರು ರೇಡ್ ಮಾಡಿದೆ. ಈ ವೇಳೆ ಕಾರಾಗೃಹದಲ್ಲಿರುವ ಕೈದಿಗಳನ್ನ ಪರಿಶೀಲನೆ ಮಾಡಿ ಎರಡು ಮೊಬೈಲ್ ಹಾಗೂ ಮೂರು ಸಿಮ್ ಕಾರ್ಡ್‌ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.