ಕೇರಳದ ಕೊಟ್ಟಾಯಂನಲ್ಲಿ ಮತ್ತೆ ಹಕ್ಕಿ ಜ್ವರ ಆತಂಕ ಎದುರಾಗಿದೆ.
ಈಗಾಗಲೇ ಮೂರು ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದು, ಇಂದಿನಿಂದ ಸಾಮೂಹಿಕವಾಗಿ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭವಾಗಲಿದೆ. ವೇಚರ್,ಅಯ್ಮಾನಂ ಮತ್ತು ಕಲ್ಲಾರಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ.
ಪಶು ಸಂಗೋಪನಾ ಇಲಾಖೆಯ 10 ಕ್ಷಿಪ್ರ ಪ್ರಕ್ರಿಯಾ ತಂಡಗಳು ಸೇರಿ ಹಕ್ಕಿಗಳನ್ನು ಕೊಲ್ಲಲಿವೆ.
ನಿಯಂತ್ರಣದಲ್ಲಿ ಇಡದಿದ್ದರೆ ಹಕ್ಕಿಜ್ವರ ವೇಗವಾಗಿ ಹರಡಲಿದ್ದು, ಮಾಹಿತಿ ಅನ್ವಯ 28-35 ಸಾವಿರ ಹಕ್ಕಿಗಳನ್ನು ಕೊಲ್ಲಬೇಕಿದೆ. ನಿಯಂತ್ರಣ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಡಾ.ಪಿ.ಕೆ. ಜಯಶ್ರೀ ಅವರು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.
ಭೋಪಾಲ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಲ್ಲಿ ಪರೀಕ್ಷೆ ನಡೆಸಿದ್ದು, ಹಕ್ಕಿಗಳಲ್ಲಿ ಜ್ವರ ಇರುವುದು ಪತ್ತೆಯಾಗಿದೆ. ಈ ಮೊದಲು ಆಲಪ್ಪುಳದಲ್ಲಿ ಪ್ರಕರಣಗಳು ಕಾಣಿಸಿದ್ದು, ಪಕ್ಷಿಗಳು, ಬಾತುಕೋಳಿಗಳನ್ನು ಕೊಲ್ಲಲಾಗಿತ್ತು. ಇದರಿಂದಾಗಿ ಕೋಳಿ ಸಾಕಣಿಕೆಯಲ್ಲಿ ತೊಡಗಿರುವವರಿಗೆ ಅಪಾರ ನಷ್ಟವಾಗಿದೆ.