Publish Date: Wed, 31 Dec 2025 (18:53 IST)
Updated Date: Wed, 31 Dec 2025 (18:56 IST)
ಬೆಂಗಳೂರು: ಬಯೋಕಾನ್ ಕಂಪನಿಯ ಉದ್ಯೋಗಿ ಅನಂತಕುಮಾರ್(26) 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಕಂಪನಿ ಮುಖ್ಯಸ್ಥೆ ಕಿರಣ್ ಮುಜುಂಧಾರ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವರದಿಯಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಕಿರ್ಣ್ ಅವರು ಬರೆದುಕೊಂಡಿದ್ದಾರೆ. ಈ ದುರಂತದ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ಈ ಸಂಬಂಧ ಪೊಲೀಸರಲ್ಲಿ ಮಾಹಿತಿ ಪಡೆದುಕೊಂಡಾಗ, ಬನಶಂಕರಿಯ ಅನಂತ್ ಕುಮಾರ್ ಅವರು ಕಳೆದ ಎರಡು ತಿಂಗಳಿನಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಐದನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ ಹೇಳಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಿರಣ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಮಾಧ್ಯಮಗಳು ಆತ್ಮಹತ್ಯೆಯ ಬಗ್ಗೆ ಸುದ್ದಿ ಮಾಡಿ ಅವರ ಕೆಲಸ ಮಾಡಿದ್ದಾರೆ. ನೀವು ವಿಚಾರಣೆಯನ್ನು ಪ್ರಾರಂಭಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.