ಬೆಳಗಾವಿ: ಇತ್ತೀಚೆಗಿನ ದಿನಗಳಲ್ಲಿ ಜನ ಎಲ್ಲೇ ಹೋಗಬೇಕಿದ್ದರೂ ಗೂಗಲ್ ಮ್ಯಾಪ್ ಬಳಸಿ ಹೋಗುವುದು ಸಾಮಾನ್ಯ. ಆದರೆ ಇದೇ ಕೆಲವೊಮ್ಮೆ ಎಡವಟ್ಟಿಗೆ ಕಾರಣವಾಗುತ್ತದೆ. ಅಂತಹದ್ದೇ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಂಜಿತ್ ದಾಸ್ ಮತ್ತು ಕುಟುಂಬ ಕಾರು ಮೂಲಕ ಗೋವಾಕ್ಕೆ ಹೊರಟಿದ್ದರು. ದಾರಿ ತಿಳಿಯಲು ಗೂಗಲ್ ಮ್ಯಾಪ್ ಆನ್ ಮಾಡಿಕೊಂಡಿದ್ದರು. ಗೂಗಲ್ ಮ್ಯಾಪ್ ನ ಸಲಹೆಯಂತೇ ತೆರಳುತ್ತಿದ್ದ ರಂಜಿತ್ ದಾಸ್ ಮತ್ತು ಕುಟುಂಬ ಬೆಳಗಾವಿ ಜಿಲ್ಲೆಯ ಭೀಮಘಡ ದಟ್ಟ ಅರಣ್ಯ ಪ್ರದೇಶಕ್ಕೆ ಬಂದು ತಲುಪಿತ್ತು.
ಇದು ತಿಳಿಯುವಷ್ಟರಲ್ಲಿ ಅವರು ದಟ್ಟ ಕಾಡಿನೊಳಗೆ ಸುಮಾರು 6 ರಿಂದ 7 ಕಿ.ಮೀ. ದೂರ ಬಂದಾಗಿತ್ತು. ಅದೂ ಮಧ್ಯರಾತ್ರಿ ಬೇರೆ. ಎತ್ತ ಹೋಗಬೇಕೆಂದು ತಿಳಿಯದೇ ಯಾರನ್ನಾದರೂ ಕರೆಯೋಣವೆಂದರೆ ಮೊಬೈಲ್ ನೆಟ್ ವರ್ಕ್ ಇರಲಿಲ್ಲ. ಅನಿವಾರ್ಯವಾಗಿ ರಂಜಿತ್ ದಾಸ್ ಮತ್ತು ಕುಟುಂಬ ತಮ್ಮ ಕಾರಿನಲ್ಲೇ ಆ ದಟ್ಟ ಕಾಡಿನ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿ ಕಳೆಯುವಂತಾಯಿತು.
ಮರುದಿನ ಬೆಳಿಗ್ಗೆಯಾಗುತ್ತಿದ್ದಂತೇ ಸುಮಾರು 4 ಕಿ.ಮೀ. ದೂರ ನಡೆದ ರಂಜಿತ್ ದಾಸ್ ಮೊಬೈಲ್ ನೆಟ್ ವರ್ಕ್ ಬರುವ ಸ್ಥಳ ತಿಳಿದುಕೊಂಡು ಅಲ್ಲಿಂದ ಪೊಲೀಸರಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಕುಟುಂಬದವರನ್ನು ರಕ್ಷಿಸಿದ್ದಾರೆ.