ಪಾಟ್ನಾ: ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಮೊಳಗುವಾಗ ನಡೆದುಕೊಂಡ ರೀತಿಗೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ.
ನಿತೀಶ್ ಕುಮಾರ್ ಬಿಹಾರದ ಕ್ರೀಡಾಕೂಟವೊಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು. ವೇದಿಕೆಯಲ್ಲಿದ್ದ ನಿತೀಶ್ ಕುಮಾರ್ ಹಾಗೂ ಎಲ್ಲಾ ಗಣ್ಯರೂ ಎದ್ದು ನಿಂತಿದ್ದರು.
ಆದರೆ ರಾಷ್ಟ್ರಗೀತೆ ಮೊಳಗುವಾಗ ಸ್ತಬ್ಧವಾಗಿ ನಿಂತು ಗೌರವ ಸೂಚಿಸುವ ಬದಲು ಪಕ್ಕದಲ್ಲಿದ್ದ ವ್ಯಕ್ತಿಯ ಜೊತೆ ಮಾತನಾಡುತ್ತಾ ವೇದಿಕೆಯ ಮುಂಭಾಗದಲ್ಲಿದ್ದವರಿಗೆ ಕೈ ಮುಗಿದು ನಮಸ್ಕಾರ ಮಾಡುತ್ತಾ ನಿತೀಶ್ ತಮ್ಮದೇ ಲೋಕದಲ್ಲಿ ಮುಳುಗಿದ್ದರು.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ. ಒಬ್ಬ ಮುಖ್ಯಮಂತ್ರಿಯಾಗಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಕನಿಷ್ಠ ಜ್ಞಾನವೂ ಇವರಿಗಲ್ಲವೇ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.