Publish Date: Fri, 25 Sep 2026 (09:41 IST)
Updated Date: Fri, 25 Sep 2026 (09:45 IST)
ಬೆಂಗಳೂರು / ಧರ್ಮಸ್ಥಳ: ದಶಕಕ್ಕೂ ಹೆಚ್ಚು ಕಾಲದಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಉಜಿರೆ ಸಮೀಪ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ (17) ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಹೊಸ ಜೀವ ಸಿಕ್ಕಿದೆ. ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ನಿರ್ದೇಶನದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪ್ರಕರಣದ ನಿಷ್ಪಕ್ಷಪಾತ ಮರುತನಿಖೆಗಾಗಿ ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ 5 ಸದಸ್ಯರ ನೂತನ ವಿಶೇಷ ತನಿಖಾ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ತಮ್ಮ ಮಗಳಿಗೆ ನ್ಯಾಯ ಸಿಗಬೇಕೆಂದು ಸುದೀರ್ಘ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು. ಈ ಹಿಂದೆ ಸಿಐಡಿ ಹಾಗೂ ಸಿಬಿಐ ನಡೆಸಿದ್ದ ತನಿಖೆಗಳಲ್ಲಿ ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ವಿಚಾರಣಾ ನ್ಯಾಯಾಲಯವು ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿದ ನಂತರ, ಪ್ರಕರಣದ ಸರಿಯಾದ ತನಿಖೆ ನಡೆದಿಲ್ಲ ಎಂದು ಆರೋಪಿಸಿ ಸೌಜನ್ಯ ಕುಟುಂಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಸಂಪೂರ್ಣ ಮರುತನಿಖೆ ನಡೆಸಲು ಆದೇಶಿಸಿದ್ದು, ಯಾವುದೇ ಹಳೆಯ ಅಧಿಕಾರಿಗಳನ್ನು ಸೇರಿಸಿಕೊಳ್ಳದೆ ಹೊಸ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಎಸ್‌ಐಟಿ ರಚಿಸುವಂತೆ ನಿರ್ದೇಶಿಸಿತ್ತು. ಜೊತೆಗೆ, ತನಿಖೆಯನ್ನು ಮೂರು ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಗಡುವು ನೀಡಿದೆ.
ಎಸ್‌ಐಟಿಯಲ್ಲಿ ಯಾರಿದ್ದಾರೆ?
ಹಿರಿಯ ಹಾಗೂ ಖಡಕ್ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದ ಈ ತಂಡದಲ್ಲಿ ಅನುಭವಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ:
ಎನ್. ಶಶಿಕುಮಾರ್ – ಐಜಿಪಿ (ತಂಡದ ಮುಖ್ಯಸ್ಥರು)
ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ – ಮಂಗಳೂರು ನಗರ ಪೊಲೀಸ್ ಕಮಿಷನರ್
ನಿಶಾ ಜೇಮ್ಸ್ – ರಾಜ್ಯ ಗುಪ್ತದಳದ ಎಸ್.ಪಿ.
ಲೋಕೇಶ್ ಜಗಲಸಾರ್ – ಸಿಐಡಿ ಎಸ್.ಪಿ.
ವೆಂಕಟೇಶ್ ಪ್ರಸನ್ನ – ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್.ಪಿ.
ಈ ನೂತನ ಎಸ್‌ಐಟಿಗೆ ಸಂಪೂರ್ಣ ತನಿಖಾ ಅಧಿಕಾರಗಳನ್ನು ನೀಡಲಾಗಿದ್ದು, ಹೊಸ ಸಾಕ್ಷ್ಯಾಧಾರಗಳ ಶೋಧನೆ ಹಾಗೂ ವೈಜ್ಞಾನಿಕ ತನಿಖೆಯ ಮೂಲಕ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಸೂಚಿಸಲಾಗಿದೆ.
2012ರ ಅಕ್ಟೋಬರ್‌ನಲ್ಲಿ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಸೌಜನ್ಯ ಅವರ ಭೀಕರ ಕೊಲೆ ನಡೆದಿತ್ತು. ಸುದೀರ್ಘ 14 ವರ್ಷಗಳ ಕಾಲದ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಮತ್ತು ತಕ್ಷಣವೇ ಸರ್ಕಾರ ಎಸ್‌ಐಟಿ ರಚಿಸಿರುವುದು ಸೌಜನ್ಯ ಕುಟುಂಬಸ್ಥರಲ್ಲಿ ಹಾಗೂ ಸಾರ್ವಜನಿಕರಲ್ಲಿ ನೈಜ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂಬ ಹೊಸ ಭರವಸೆಯನ್ನು ಮೂಡಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ