Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಖರ್ಗೆ ಆಪ್ತನ ಕಿರುಕುಳಕ್ಕೆಯೇ ಬೀದರ್ ಗುತ್ತಿಗೆದಾರ ಆತ್ಮಹತ್ಯೆ: ಬಿವೈ ವಿಜಯೇಂದ್ರ ಆರೋಪ

Minister Priyanka Kharge, Bidar Contructer Case, BJP President BY Vijayendra

Sampriya

ಬೆಂಗಳೂರು , ಗುರುವಾರ, 26 ಡಿಸೆಂಬರ್ 2024 (19:47 IST)
Photo Courtesy X
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಮಂತ್ರಿಗಳು ತಮ್ಮ ಬಲಗೈ ಬಂಟರು ಹಾಗೂ ಆಪ್ತ ಸಹಾಯಕರಿಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೀಡಿದಂತಿದೆ. ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತಸಹಾಯಕನ ಕಿರುಕುಳಕ್ಕೆ ತಹಸೀಲ್ದಾರ್ ಕಚೇರಿಯ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ, ಇದರ ಬೆನ್ನಲ್ಲೇ ವಿಧಾನ ಮಂಡಲದ ಸುವರ್ಣ ಸೌಧಕ್ಕೆ ನುಗ್ಗಿ ಶಾಸಕರಾದ ಸಿಟಿ ರವಿ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದ ಸುದ್ದಿ ಹಸಿಯಾಗಿರುವಾಗಲೇ ಇಂದು ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ರಾಜು ಕಪನೂರನ ಕಿರುಕುಳ ಹಾಗೂ ಬೆದರಿಕೆಯಿಂದ ತತ್ತರಿಸಿದ್ದ ಬೀದರ್ ನ ಗುತ್ತಿಗೆದಾರ ಸಚಿನ್ ಸುದೀರ್ಘ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್‌  ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನೂ ಕರುಣಿಸಿ ನತದೃಷ್ಟ ಕುಟುಂಬಗಳನ್ನು ಅನಾಥವಾಗಿಸಲು ಹೊರಟಿದೆ. ಪ್ರತಿಯೊಂದು ವಿಷಯದಲ್ಲೂ ಅನಗತ್ಯ ಮೂಗು ತೂರಿಸಿ ತಮ್ಮ ನಡೆ, ನುಡಿಗಳಲ್ಲಿ ದಾಷ್ಟ್ಯತನ ಪ್ರದರ್ಶಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂಬುದು ಆತ್ಮಹತ್ಯೆಗೊಳಗಾದ ದುರ್ದೈವಿ ಗುತ್ತಿಗೆದಾರ ಸಚಿನ್ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಲಿ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ವಿಪರೀತ ಆರ್ಥಿಕ ಒತ್ತಡ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ. ಸಚಿವರ ಕೈ ಕೆಳಗಿನ ಅಧಿಕಾರಿಗಳು ಹಾಗೂ ಆಪ್ತರ ಒತ್ತಡಗಳು ಗುತ್ತಿಗೆದಾರರನ್ನು ಉಸಿರುಗಟ್ಟಿಸುತ್ತಿವೆ.

ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ ಹಾಗೂ ಕಾಂಗ್ರೆಸ್ ಮುಖಂಡ ರಾಜುವಿನ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿಟ್ಟಿರುವ ಪತ್ರ ಇದಕ್ಕೆ ಸಾಕ್ಷಿ ಒದಗಿಸಿದೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಪಕ್ಷಪಾತಿಗಳಂತೆ ವರ್ತಿಸುವುದನ್ನು ಬಿಟ್ಟು ಪಾರದರ್ಶಕ ತನಿಖೆ ನಡೆಸದಿದ್ದರೆ ಈ ವಿಷಯವನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಿದೆ.

ಸಾವಿಗೀಡಾದ ನತದೃಷ್ಟ ಸಚಿನ್ ಆತ್ಮಕ್ಕೆ ಶಾಂತಿ ದೊರಕಲಿ, ಸರ್ಕಾರ ಈ ಕೂಡಲೇ ಆ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಿ, ಮೃತ ಗುತ್ತಿಗೆದಾರ ಸಚಿನ್ ಪಡೆದಿದ್ದ ಗುತ್ತಿಗೆ ಕೆಲಸಗಳ ಬಾಕಿ ಉಳಿದಿರುವ ಹಣವನ್ನು ಪಾವತಿಸಿ ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಿ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಮೂಲಕ ನ್ಯಾಯ ಒದಗಿಸಲಿ ಎಂದು ಒತ್ತಾಯಿಸುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರವಿಲ್ಲದ ಭೂಪಟ ಪ್ರದರ್ಶಿಸಿದ ಕಾಂಗ್ರೆಸ್‌ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು:ವಿಜಯೇಂದ್ರ