Select Your Language

Notifications

webdunia
webdunia
webdunia
webdunia

ಹಿಂದೂಗಳನ್ನು ಓಡಿಸಿ ಜಾಗ ಕಬ್ಜಾ ಮಾಡಲು ಹಸುವಿನ ಮೇಲೆ ಕ್ರೌರ್ಯ: ಭಾಸ್ಕರ ರಾವ್

Bhaskar Rao

Krishnaveni K

ಬೆಂಗಳೂರು , ಸೋಮವಾರ, 13 ಜನವರಿ 2025 (14:17 IST)
ಬೆಂಗಳೂರು: ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಒಂದು ಷಡ್ಯಂತ್ರ ಮತ್ತು ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಓಡಿಸಿ ಜಾಗ ಕಬ್ಜಾ ಮಾಡುವ ದುಷ್ಕತ್ಯ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಅಲ್ಲಿಂದ 5 ಬಾರಿ ಆಯ್ಕೆಯಾದ ಜಮೀರ್ ಅಹ್ಮದ್ ಮೂರು ಹಸು ಖರೀದಿಸಿ ನೀಡುವುದಾಗಿ ಹೇಳಿಕೆ ನೀಡಿದ್ದು ಅದು ಇನ್ನಷ್ಟು ಆಘಾತಕಾರಿ ಎಂದು ಖಂಡಿಸಿದರು. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹೀಗಾಗಿದೆ. ಇವರಿಗೆ ಮಾನವೀಯತೆ ಇಲ್ಲವೇ? ಹಸು ಖರೀದಿಸಿ ಕೊಡಲು ಇದೇನು ಆಟದ ಸಾಮಗ್ರಿಯೇ ಎಂದು ಪ್ರಶ್ನಿಸಿದರು.

ಇದರಿಂದ ಹಿಂದೂಗಳಿಗೆ ದೊಡ್ಡ ಆಘಾತವಾಗಿದೆ. ರಾಜ್ಯ ಸರಕಾರದ ಅದೃಷ್ಟ ಚೆನ್ನಾಗಿದ್ದ ಕಾರಣ ಚಾಮರಾಜಪೇಟೆಯಲ್ಲಿ ರಕ್ತಪಾತ ಆಗಲಿಲ್ಲ; ಕೋಮುದಂಗೆ ಆಗುವ ಸಾಧ್ಯತೆ ಇತ್ತು. ದಾನಿಗಳಾದ ಸಜ್ಜನ್ ರಾವ್ ಅವರು ಪಶುಚಿಕಿತ್ಸೆಗಾಗಿ 100 ವರ್ಷಗಳ ಹಿಂದೆ ಆಸ್ಪತ್ರೆ ಕೊಟ್ಟಿದ್ದರು. 2,227 ಪಶುಗಳು ಅಲ್ಲಿವೆ. ಅಲ್ಲಿ ಯಾರ ಜೊತೆಗೂ ಚರ್ಚಿಸದೆ ಆಸ್ಪತ್ರೆ ಕೆಡವಿ ಅಲ್ಪಸಂಖ್ಯಾತರ ಶಾಲೆ ನಿರ್ಮಿಸಲು ಹೊರಟದ್ದು ದೊಡ್ಡ ತಪ್ಪು ಎಂದು ವಿಶ್ಲೇಷಿಸಿದರು.

ಆಗ ದೊಡ್ಡ ಪ್ರತಿಭಟನೆ ನಡೆದಿತ್ತು. ಈ ಹಸುಗಳ ಮಾಲೀಕರು ಮುಂಚೂಣಿಯಲ್ಲಿದ್ದರು. ಅವರ ಮನೆಯೂ ಮದ್ರಸ ಎದುರುಗಡೆ ಇದೆ. ಜಮೀರ್ ಅಹ್ಮದ್ ಅಲ್ಲಿನ ಹಿಂದೂಗಳಲ್ಲಿ ಭಯ ಹುಟ್ಟಿಸಿ ಜಾಗ ಬಿಟ್ಟು ಹೊರಟು ಹೋಗಬೇಕೆಂದು ಯತ್ನಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಘಟನೆ ಖಂಡನೀಯ ಮಾತ್ರವಲ್ಲ ಅಕ್ಷಮ್ಯ ಎಂದು ಅವರು ನುಡಿದರು.

ಒತ್ತಡದ ಕಾರಣ ಸಂಬಂಧವಿಲ್ಲದ ಬಿಹಾರಿ ಹುಚ್ಚ ವ್ಯಕ್ತಿಯನ್ನು ಕರೆತಂದು ಬಂಧಿಸಿ ಸಾಕ್ಷಿ ಸೃಷ್ಟಿಸುತ್ತಿದ್ದಾರೆ. ನಿಜವಾದ ಅಪರಾಧಿಗಳನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ಆ ಕ್ಷೇತ್ರದಲ್ಲಿ ಸ್ವಚ್ಛತೆ ಇಲ್ಲ; ಅಲ್ಲದೆ, ಮಾದಕ ವಸ್ತುಗಳ ತಾಣವಾಗಿದೆ. ಅವರ ವಿರುದ್ಧ ಮಾತನಾಡಿದರೆ ರೌಡಿಶೀಟರ್ ಎಂದು ಹಾಕುತ್ತಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಜಮೀರ್ ಅಹ್ಮದ್‍ಗೆ ಬಾಲ ಬಿಚ್ಚಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ವಿನಾಶಕಾರಿ ಕೃತ್ಯಕ್ಕೆ ಪ್ರೋತ್ಸಾಹ; ಅಭಿವೃದ್ಧಿ ಕಾರ್ಯವಲ್ಲ ಎಂದ ಅವರು, ಕಲ್ಲೆಸೆಯುವವರು, ಬೆಂಕಿ ಹಚ್ಚುವ ಬ್ರಿಗೇಡ್ ತಯಾರು ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಜಮೀರ್ ಅಹ್ಮದ್ ವೈಯಕ್ತಿಕವಾಗಿ ಕೋಟ್ಯಧೀಶ ಆಗುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಏನು ಕೊಡ್ತಾರೋ, ಜಮೀರ್ ಹೇಳಿದ್ದನ್ನೆಲ್ಲ ಮಾಡಿಕೊಂಡು ಹಿಂದೂ ವಿರೋಧಿ ನಡವಳಿಕೆ ಮುಂದುವರೆಸುತ್ತಿದ್ದಾರೆ ಎಂದರು. ಬೇರೆ ಸರಕಾರ ಇದ್ದರೆ ಹೀಗಾಗಲು ಸಾಧ್ಯವಿರಲಿಲ್ಲ; ಬಸವನಗುಡಿ, ಜಯನಗರದಲ್ಲಿ ಇಂಥ ಘಟನೆ ನಡೆಯಲು ಸಾಧ್ಯವೇ ಎಂದು ಕೇಳಿದರು.

ಒಂದು ಸಮುದಾಯದ ವಿರುದ್ಧ ಮಾತನಾಡುತ್ತಿಲ್ಲ; ಸಮುದಾಯದ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ಸಮುದಾಯದವರನ್ನು ದಾರಿ ತಪ್ಪಿಸಿ ಪ್ರಚೋದಿಸಿ ಕ್ರಿಮಿನಲ್ ಕೆಲಸ ಮಾಡಿಸುತ್ತಿದ್ದಾರೆ. 153 ಸೆಕ್ಷನ್ ಅಡಿ ಕೇಸು ದಾಖಲಿಸಬೇಕಿತ್ತು. ಯಾಕೆ ಮಾಡಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಗೋವು ಸಾಕುವವರನ್ನು ಅಲ್ಲಿಂದ ಓಡಿಸಿ ಆಸ್ಪತ್ರೆ ಕಬ್ಜಾ ಪಡೆಯಲು, ಹಿಂದೂಪರ ಸಂಸ್ಥೆಗಳು ಬೆಳೆಯಬಾರದೆಂದು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲಿ ಗೋವಧೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿಲ್ಲ ಎಂದು ಟೀಕಿಸಿದರು.
 
ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಅವರು, ಸಾವಿರ ಗೋವುಗಳನ್ನು ತಂದು ಆ ಮಾಲೀಕರಿಗೆ ಕೊಟ್ಟರೂ ನಿಮ್ಮ ಪಾಪ ದೂರವಾಗದು ಎಂದು ತಿಳಿಸಿದರು. ಪಶುಗಳ ಆಸ್ಪತ್ರೆಯನ್ನು ಹಸ್ತಾಂತರ ಮಾಡದೆ ಹಾಗೇ ಮುಂದುವರೆಸಿ ಎಂದು ಒತ್ತಾಯಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾನುವಾರವೂ ಕೆಲ್ಸ ಮಾಡಿ ಗಂಡ, ಹೆಂಡ್ತಿನಾ ದೂರ ಮಾಡ್ಬೇಕೂಂತಿದ್ದೀರಾ: ವಾಟಾಳ್ ನಾಗರಾಜ್