ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಹಲವು ಬಿಜೆಪಿಯ ಶಾಸಕರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಜಾತಿ, ಪ್ರಾದೇಶಿಕತೆ, ಹಿರಿಯ, ಕಿರಿಯ ಹೀಗೆ ಹಲವು ಹಂತದಲ್ಲಿ ಶಾಸಕರು ಕಸರತ್ತು ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಬೆಳಗಾವಿ ಜಿಲ್ಲೆಯ ಇಬ್ಬರು, ಮೂರು ಜನ ಸಚಿವರಾಗೋದು ಫಿಕ್ಸ್. ಆದರೆ ಈ ಪೈಕಿ ಬೆಳಗಾವಿ ತಾಲೂಕಿನ ಯಾರೊಬ್ಬರೂ ಕೂಡ ಈವರೆಗೆ ಸಚಿವರಾಗಿಲ್ಲ ಎನ್ನುವುದು ಸೋಜಿಗ. ಬೆಳಗಾವಿ ತಾಲೂಕು ಮೊದಲಿನಿಂದಲೂ ನಾಲ್ಕು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಇತಿಹಾಸದಲ್ಲಿ ಒಬ್ಬೇ ಒಬ್ಬ ಶಾಸಕನಿಗೂ ಮಂತ್ರಿಗಿರಿ ಭಾಗ್ಯ ಸಿಕ್ಕಿಲ್ಲ. ಈ ಸಲ ಜೈನ ಹಾಗೂ ಮರಾಠ ಕೋಟಾದಡಿ ಇಬ್ಬರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅದೃಷ್ಟ ಯಾರ ಕೈ ಹಿಡಿಯಲಿದೆ ಎಂಬುದು ಕಾದು ನೋಡಬೇಕು.
ಬೆಳಗಾವಿ ತಾಲೂಕು ನಾಲ್ಕು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರಕ್ಕೆ ಹಲವು ಗ್ರಾಮಗಳು ಸೇರಿಕೊಂಡಿವೆ. ಆದರೆ, ಬೆಳಗಾವಿ ತಾಲೂಕಿನಲ್ಲಿ ಮೊದಲಿನಿಂದಲೂ ಭಾಷೆ ಆಧಾರದ ಮೇಲೆ ಚುನಾವಣೆಗಳು ನಡೆದಿವೆ. ಈಗಿನ ಬೆಳಗಾವಿ ದಕ್ಷಿಣ ಕ್ಷೇತ್ರ ಮೊದಲು ಉಚ್ಚಗಾವಿ ಕ್ಷೇತ್ರದ ಹೆಸರಿನಲ್ಲಿ ಇತ್ತು. 2008ರಲ್ಲಿ ಉಚ್ಚಗಾವಿ ಹೆಸರು ಬದಲಾವಣೆ ಆಗಿ ಬೆಳಗಾವಿ ದಕ್ಷಿಣ ಕ್ಷೇತ್ರ ಎಂದು ಹೆಸರು ಬದಲಾವಣೆ ಆಗಿದೆ. ಈ ಕ್ಷೇತ್ರದಲ್ಲಿ 1967ರಿಂದ 1994ರ ವರಗೆ ಗೆದ್ದಿರೋ ಬಹುತೇಕರು ಎಂಇಎಸ್ ಬೆಂಬಲಿತ ಶಾಸಕರು. 1999ರಲ್ಲಿ ಪ್ರಥಮವಾಗಿ ಬಿಜೆಪಿಯ ಮನೋಹರ್ ಕಡೊಲ್ಕರ್ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ಪಕ್ಷ ಖಾತೆ ತೆರೆಯಿತು. ನಂತರ 2004, 2013ರಲ್ಲಿ ಮತ್ತೆ ಎಂಇಎಸ್ ಶಾಸಕರು ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ರು. 2008, 2018ರಲ್ಲಿ ಬಿಜೆಪಿಯ ಅಭಯ ಪಾಟೀಲ್ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಆಯ್ಕೆ ಆಗಿದ್ದಾರೆ.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 1967-1994ರ ವರೆಗೆ ಎಂಇಎಸ್ ಬೆಂಬಲಿತ ಮುಖಂಡರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಂತರ 1999-2004ರಲ್ಲಿ ಕಾಂಗ್ರೆಸ್ ಪಕ್ಷದ ರಮೇಶ ಕುಡಚಿ ಗೆದ್ದಿದ್ದರು. ಬಳಿಕ 2008-2013ರಲ್ಲಿ ಕಾಂಗ್ರೆಸ್ ಪಕ್ಷದ ಫಿರೋಜ್ ಸೇಠ್ ಆಯ್ಕೆಯಾಗಿದ್ದರು. ಇದೀಗ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಅನಿಲ್ ಬೆನಕೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಾಗೇವಾಡಿ ಕ್ಷೇತ್ರ 2008ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವಾಗಿ ಬದಲಾವಣೆ ಆಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ ಶಾಸಕರು ಗೆದಿದ್ದಾರೆ. ಆದರೆ ಯಾರೊಬ್ಬರಿಗೂ ಮಂತ್ರಿ ಭಾಗ್ಯ ಈವರೆಗೆ ಸಿಕ್ಕಿಲ್ಲ. 1967-1972ರಲ್ಲಿ ಕಾಂಗ್ರೆಸ್ ಪಕ್ಷದ ಸಿ ಎಲ್ ಪಟ್ಟಣಶೆಟ್ಟಿ, ಎಸ್ ಎ ಪಾಟೀಲ್ ಗೆದ್ದಿದ್ದರು. 1978, 1983ರಲ್ಲಿ ಎಂಇಎಸ್ನ ಜಿ ಎಲ್ ಅಷ್ಟೇಕರ, 1985, 1994, 1999ರಲ್ಲಿ ಎಸ್ ಸಿ ಮಾಳಗಿ ಅವರು ಜನತಾದಳದಿಂದ ಆಯ್ಕೆಯಾಗಿದ್ದರು. 2004ರಲ್ಲಿ ಮೊದಲ ಸಲ ಅಭಯ ಪಾಟೀಲ್ ಬಿಜೆಪಿಯಿಂದ ಗೆದಿದ್ದರು. ಬಳಿಕ 2008, 2013ರಲ್ಲಿ ಬಿಜೆಪಿಯ ಸಂಜಯ ಪಾಟೀಲ್ ಜಯ ಗಳಿಸಿದ್ದು, 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದು ಶಾಸಕಿಯಾಗಿದ್ದಾರೆ.
ಇನ್ನು, ಯಮಕನಮರಡಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿರುವ ಸತೀಶ್ ಜಾರಕಿಹೊಳಿ ಅವರು ಎರಡು ಬಾರಿ ಸಚಿವರಾಗಿದ್ದು ಹೊರತುಪಡಿಸಿದರೆ, ತಾಲೂಕಿನ ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿನ ಯಾವ ಶಾಸಕರೂ ಕೂಡ ಸಚಿವರಾಗಿದ್ದಿಲ್ಲ. ಇದೀಗ ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ನಗರದ ಇಬ್ಬರು ಶಾಸಕರು ಪ್ರಯತ್ನ ಆರಂಭಿಸಿದ್ದಾರೆ. ಈ ಪೈಕಿನ ಜೈನ್ ಕೋಟಾದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್, ಮರಾಠ ಕೋಟಾದಲ್ಲಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಕಸರತ್ತು ನಡೆಸುತ್ತಿದ್ದಾರೆ. ಆದರೆ ಯಾರಿಗೆ ಅದೃಷ್ಠ ಒಲಿಯಲಿದೆ ಎಂಬುದು ಮಾತ್ರ ಇನ್ನೂ ಕಾದು ನೋಡಬೇಕಿದೆ.