ಪುಟ್ಟ ಮಕ್ಕಳನ್ನು ಭಿಕ್ಷಾಟನೆಗೆ ಒಯ್ಯುವ ದಂಧೆಗೆ ಕಡಿವಾಣ ಹಾಕಲು ಬದ್ಧರಿದ್ದೇವೆ ಭಿಕ್ಷಾಟನೆ ಸಂಪೂರ್ಣ ನಿರ್ಮೂಲನೆ ನಮ್ಮ ಸರ್ಕಾರದ ಉದ್ದೇಶ, ಈ ಹಿನ್ನೆಲೆಯಲ್ಲಿ ಗೃಹ, ಕಾರ್ಮಿಕ ಹಾಗೂ ಮಕ್ಕಳ ಕಲ್ಯಾಣ ಸಚಿವರೊಂದಿಗೆ ಸಭೆ ನಡೆಸಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಭಿಕ್ಷಾಟನೆ ನಿರ್ಮೂಲನೆ ಸಂಬಂಧ ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಕಾರ್ಮಿಕ ಇಲಾಖೆ ಸಚಿವರು, ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಿಕ್ಷಾಟನೆ ಹೆಸರಿನಲ್ಲಿ ವಿವಿಧ ಕಾನೂನು ಬಾಹಿರ ಕೃತ್ಯಗಳು ನಡೆಯುವುದನ್ನು ಇಲಾಖೆ ಗುರುತಿಸಿದೆ. ವಿಶೇಷವಾಗಿ ಮಕ್ಕಳಿಗೆ ನಿಷೇಧಿತ ಮತ್ತು ಬರುವ ಮದ್ದು ನೀಡಿ ಭಿಕ್ಷಾಟನೆಗೆ ಬಳಸಿಕೊಳ್ಳುವುದು, ಅಂಗವಿಕಲರನ್ನಾಗಿ ಮಾಡಿ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದರು.
ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಹಾಗೂ ಈ ಚಟುವಟಿಕೆಯಲ್ಲಿ ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕ ಇಲಾಖೆಗಳ ಪಾತ್ರ ಹಾಗೂ ಸಹಕಾರದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ಮಾಡಲಾಗಿದೆ. ಭಿಕ್ಷಾಟನೆ ನಿರ್ಮೂಲನೆಗೆ ಸಂಬಂಧಿಸಿದ ಇಲಾಖೆಗಳು ಸಂಪೂರ್ಣವಾಗಿ ಸಹಕಾರ ನೀಡಲಿವೆ ಎಂದರು