ಬೆಂಗಳೂರು: ಭಿಕ್ಷಕನೊಬ್ಬ ಏನೂ ಅರಿಯದೇ ಮಾಡಿದ ತಪ್ಪಿನಿಂದ ಸ್ಥಳೀಯರಿಗೆ ಆತಂಕವಾಗಿದ್ದು, ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸುವ ಪರಿಸ್ಥಿತಿ ಬಂದಿದೆ.
ಇದು ನಡೆದಿರುವುದು ಬೆಂಗಳೂರಿನ ಮಿನರ್ವ ಸರ್ಕಲ್ ಬಳಿ. ಫೆಬ್ರವರಿ 12 ರಂದು ಈ ಘಟನೆ ನಡೆದಿದೆ. ಭಿಕ್ಷುಕನೊಬ್ಬ ಎಟಿಎಂ ಮಿಷನ್ ಬಳಿ ಕೆಲವು ಬಾಕ್ಸ್ ಇಟ್ಟು ಹೋಗಿದ್ದ. ಇದನ್ನು ನೋಡಿದ ಮಂದಿ ಇದೇನು ಎಂದು ಆತಂಕಗೊಂಡರು. ಎಟಿಎಂ ಹಣವನ್ನು ತುಂಬಿಡುವ ಬಾಕ್ಸ್ ಅದು. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಗೆ ಅನುಮಾನವಾಗಿತ್ತು. ತಕ್ಷಣವೇ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಅಷ್ಟರಲ್ಲಿ ಘಟನೆ ಅಲ್ಲಿದ್ದ ಸ್ಥಳೀಯರಿಗೆಲ್ಲೇ ಗೊತ್ತಾಗಿತ್ತು. ಇದರಿಂದ ಕೋಲಾಹಲವೇ ಉಂಟಾಗಿತ್ತು. ಎಟಿಎಂ ಹಣ ಕಳ್ಳತನಕ್ಕೆ ಪ್ರಯತ್ನಿಸಿರಬಹುದು ಅಥವಾ ಬಾಂಬ್ ಇಟ್ಟಿರಬಹುದು ಎಂದು ಅಲ್ಲಿದ್ದವರು ತಲೆಗೊಂದರಂತೆ ಮಾತನಾಡಲು ಶುರು ಮಾಡಿದರು. ಪೊಲೀಸರೂ ರಿಸ್ಕ್ ಬೇಡವೆಂದು ಬಾಂಬ್ ನಿಷ್ಕ್ರಿಯ ದಳದವರನ್ನು ಕರೆದರು.
ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ಮಾಡಿದಾಗ ಬಾಕ್ಸ್ ಖಾಲಿ ಎಂದು ಗೊತ್ತಾಯಿತು. ನಿಜ ತಿಳಿದ ಮೇಲೆ ಜನರು ನಿಟ್ಟುಸಿರು ಬಿಟ್ಟರು. ಹಾಗಿದ್ದರೂ ಈ ರಾಶಿ ಬಾಕ್ಸ್ ಗಳು ಎಲ್ಲಿಂದ ಬಂತು ಎಂದು ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಭಿಕ್ಷುಕನೊಬ್ಬ ತಂದಿಟ್ಟಿದ್ದು ಗೊತ್ತಾಗಿದೆ. ಇದೀಗ ಆ ಭಿಕ್ಷುಕನಿಗಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದೋ, ಗಂಭೀರತೆ ಅರಿಯದೇ ಭಿಕ್ಷಕು ಈ ರೀತಿ ಮಾಡಿದನೋ ಗೊತ್ತಾಗಿಲ್ಲ.