ಜಿಲ್ಲೆಯಲ್ಲಿರುವ ರಸ್ತೆಗಳ ಸ್ಥಿತಿ ಹದಗೆಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸುಧಾರಿತ ರಸ್ತೆಗಳನ್ನಾಗಿ ಮಾಡ ಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಬೆಂ. ಗ್ರಾ. ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ ದ ಅವರು, ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಟೋಲ್‌ಗಳಲ್ಲಿ ವಿಐಪಿ ವಾಹನಗಳು ಚಲಿಸುವ ಮಾರ್ಗಗಳಿಗೆ ಸ್ಥಳಾವಕಾಶ ಮಾಡಿ ಕೊಡಿ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ದುರಸ್ತೀಕರಣ, ರಸ್ತೆ ದೀಪಗಳ ಸರಿಯಾದ ಅಳವಡಿಕೆ, ರಸ್ತೆ ಬದಿ ಯ ಅನಗತ್ಯ ಅಂಗಡಿ ಮುಂಗಟ್ಟಗಳ ತೆರವು, ಸೂಕ್ತ ಏಕಮುಖ ರಸ್ತೆಗಳ ರಚನೆ, ರೋಡ್ ಮಾರ್ಕಿಂಗ್ ಹಾಗೂ ಮುಂತಾದ ಸಮಸ್ಯೆಗಳ ಕುರಿತಂತೆ ಸಾರಿಗೆ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.