ಬಿಬಿಎಂಪಿ ಕಚೇರಿಯ ಅಗ್ನಿ ಅವಘಡ ಕೇಸ್ ಕೂತುಹಲಕಾರಿಯಾಗ್ತಿದೆ. ದುರಂತಕ್ಕೆ ನಾನಾ ಕಾರಣಗಳು ಕೇಳಿಬರುತ್ತಿದ್ದು, ಮೂರು ಹಂತದ ತನಿಖೆಯೂ ನಡೆಯುತ್ತಿದೆ. ಸದ್ಯ ಪ್ರಕರಣ ಸಂಬಂಧ FIR ಕೂಡ ಆಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ನಿನ್ನೆ ಸಂಜೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದಿದ್ದ ಬೆಂಕಿ ಅವಘಡ ಕೇಸಿನ ತನಿಖೆ ಚುರುಕು ಪಡೆದಿದೆ. ಸದ್ಯ ಅವಘಡದಲ್ಲಿ ಗಾಯಗೊಂಡ 9 ಮಂದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇತ್ತ ಪೊಲೀಸ್ ಇಲಾಖೆ, ಇಂಧನ ಇಲಾಖೆ & ಬಿಬಿಎಂಪಿಯಿಂದ ಘಟನೆ ಸಂಬಂದ ತನಿಖೆ ಶುರುವಾಗಿದೆ.
ಸದ್ಯ ಪೊಲೀಸ್ ತನಿಖೆ ಸಂಬಂದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಹಲಸೂರು ಠಾಣೆಯಲ್ಲಿ ದೂರು ನೀಡಿದ್ರು. ಈ ದೂರಿನ್ವಯ AEE ಗಳಾದ ಆನಂದ್, ಸ್ವಾಮಿ ಹಾಗೂ ಡಿ ಗ್ರೂಪ್ ನೌಕರ ಸುರೇಶ್ ಎಂಬುವರ ಮೇಲೆ IPC 337, 338 ನಿರ್ಲಕ್ಷ್ಯ ಆರೋಪದ ಅಡಿಯಲ್ಲಿ FIR ದಾಖಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಬೆಂಕಿ ಅವಘಡವು ಕೆಮಿಕಲ್ ಟೆಸ್ಟ್ ಮಾಡುವಾಗ ನಿರ್ಲಕ್ಷ್ಯದಿಂದ ನಡೆದಿದೆ ಅನ್ನೋದು ಗೊತ್ತಾಗಿದೆ.
ಸದ್ಯಕ್ಕೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು ಘಟನೆ ಹೇಗಾಯ್ತು, ಯಾವಾಗ ಆಯ್ತು. ಯಾರಿಂದ ಆಯ್ತು ಅನ್ನೋ ಮಾಹಿತಿಗಳನ್ನು ಕಲೆ ಹಾಕ್ತಿದ್ದಾರೆ. ಹಾಗೇ ಕೆಮಿಕಲ್ ಟೆಸ್ಟಿಂಗ್ ಯಾರು ಕೆಲಸ ಮಾಡಬೇಕಿತ್ತು..? ಅವ್ರ ಬದಲಿಗೆ ಬೇರೆ ಯಾರು ಮಾಡಿದ್ದಾರೆ ಅನ್ನೋದನ್ನು ಪರಿಶೀಲನೆ ಮಾಡಲಾಗ್ತಿದೆ.