ಕೆಟ್ಟ ದುರಸ್ತಿ ಮಾಡಲು ಎಂತಹ ತಂತ್ರಜ್ಞಾನ ಬಳಸುತ್ತೀರಿ. ಜನರ ತೆರಿಗೆ ಹಣ ವ್ಯರ್ಥವಾಗುತ್ತಿರುವ ಬಗ್ಗೆ ಆತಂಕವಿದೆ. ರಿಪೇರಿಯಾದ ರಸ್ತೆಗಳೇ ಗುಂಡಿ ಏಕೆ ಬೀಳುತ್ತಿವೆ. ಕಳಪೆ ರಸ್ತೆಗಳಿಗೆ ಕಾರಣರಾದ ಅಧಿಕಾರಿಗಳನ್ನು ಬಿಡಲ್ಲ ಎಂದು ಬಿಬಿಎಂಪಿಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್ರನ್ನು ಹೈ ತರಾಟೆಗೆ ತೆಗೆದುಕೊಳ್ಳಲಾಗಿದೆ. ನೀವು ಯಾಂತ್ರಿಕ ಗುಂಡಿ ಮುಚ್ಚುವ ಯಂತ್ರ ಬಳಸಿದ್ದೀರಾ ಎಂಬ ಹೈಕೋರ್ಟ್ ಪ್ರಶ್ನೆಗೆ ಪ್ರಹ್ಲಾದ್ ಗೊಂದಲಕಾರಿ ಉತ್ತರ ನೀಡಿದ್ದಾರೆ. ಮೊದಲಿಗೆ ಹೌದು ಎಂದು ನಂತರ ಇಲ್ಲ ಎಂದು ಹೇಳಿದ್ದಾರೆ. ಬಿಬಿಎಂಪಿ ಮುಖ್ಯ ಇಂಜಿನಿಯರ್ಗೆ ಹೈಕೋರ್ಟ್ ತಪರಾಕಿ ಹಾಕಿದೆ. ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸಿದರೆ ಹುಷಾರ್, ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ನೀವು ಕೋರ್ಟ್ನಲ್ಲಿದ್ದೀರಾ ಎಚ್ಚರವಿರಲಿ ಎಂದು ಕೋರ್ಟ್ ಹೇಳಿದೆ. ಮುಖ್ಯ ಇಂಜಿನಿಯರ್ಗೆ ಸಿಜೆ ರಿತುರಾಜ್ ಅವಸ್ತಿ ತರಾಟೆ ತೆಗೆದುಕೊಂಡಿದ್ದಾರೆ.
ಗುಂಡಿ ಮುಚ್ಚುವ ಯಂತ್ರ ಬಳಸಿದ ಮೊದಲ ಸಂಸ್ಥೆ BBMP ಎಂಬ ಬಿಬಿಎಂಪಿ ವಕೀಲರ ಸಮರ್ಥನೆಗೆ ಹೈಕೋರ್ಟ್ ಗರಂ ಆಗಿದೆ. ಬಿಬಿಎಂಪಿಯ ಯೋಗ್ಯತೆ ಏನೆಂದು ಎಲ್ಲರಿಗೂ ಗೊತ್ತಿದೆ. ಈ ತಂತ್ರಜ್ಞಾನ ಬಳಸಿದ ನಗರವೆಂದು ಹೇಳಿಕೊಳ್ಳುತ್ತೀರಿ. ಮಳೆಯ ನಂತರ ನಿಮ್ಮ ರಸ್ತೆಗಳಲ್ಲಿ ವಾಹನ ಚಲಾಯಿಸಲಾಗಲ್ಲ. ಜನರು ಈ ರೀತಿ ಸಾಯುವುದನ್ನು ನೋಡಲು ಸಾಧ್ಯವಿಲ್ಲ. ಬಿಬಿಎಂಪಿ ಮುಖ್ಯ ಇಂಜಿನಿಯರ್ ಅಮಾನತು ಮಾಡುತ್ತೇವೆ. ಬಿಬಿಎಂಪಿಯವರು ಇಂಪ್ರೂವ್ ಆಗುವಂತೆ ಕಾಣುತ್ತಿಲ್ಲ. ನಿಮಗೆ ಇದೇ ಅಭ್ಯಾಸ ಆಗಿಬಿಟ್ಟಿದೆ ಎಂದು ಕೋರ್ಟ್ ಗರಂ ಆಗಿದೆ.
ನೀವು ಹವಾನಿಯಂತ್ರಿತ ಕೊಠಡಿಯಲ್ಲಿ ಕೂತಿರುತ್ತೀರಿ. ಜನರ ಕಷ್ಟಗಳ ಬಗ್ಗೆ ನಿಮಗೆ ಅರಿವಿಲ್ಲ ಎಂದು ಮುಖ್ಯ ಇಂಜಿನಿಯರ್ ಪ್ರಹ್ಲಾದ್ಗೆ ಹೈಕೋರ್ಟ್ ತಪರಾಕಿ ಹಾಕಿದೆ. ಈ ಬಗ್ಗೆ ಬಿಬಿಎಂಪಿ ವಕೀಲ ವಿ. ಶ್ರೀನಿಧಿ 1 ವಾರ ಸಮಯ ಕೋರಿದ್ದಾರೆ. ಫೆಬ್ರವರಿ 15ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ. ರಸ್ತೆ ಗುಂಡಿ ಮುಚ್ಚುವ ನೀಲನಕ್ಷೆಗೆ ಕೋರ್ಟ್ ಸೂಚನೆ ನೀಡಿದೆ. ಯಾಂತ್ರಿಕ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನ ಬಳಸಿ, ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಈ ತಂತ್ರಜ್ಞಾನ ಬಳಸಿ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಹಾಜರಿಗೆ ಸೂಚನೆ ನೀಡಿದೆ.