ಬಿಬಿಎಂಪಿಯಲ್ಲಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಉಪಮೇಯರ್ ಸ್ಥಾನ ಜೆಡಿಎಸ್ ಪಕ್ಷಕ್ಕೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮುಂದುವರೆಸಿಕೊಂಡು ಹೋಗಲು ಜೆಡಿಎಸ್ ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ನಿಜ. ಆದರೆ, ಇದೀಗ ಸಮಸ್ಯೆ ಬಗೆಹರಿದಿದೆ. ಬಿಬಿಎಂಪಿಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಸೇರಿ ಅಧಿಕಾರದಲ್ಲಿ ಮುಂದುವರಿಯುತ್ತೇವೆ ಎಂದು ಹೇಳಿದರು.
ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸಾಕಷ್ಟು ಕಸರತ್ತು ಮಾಡಿದ್ದವು. ಆದರೆ, ಜೆಡಿಎಸ್ ಪಕ್ಷದೊಂದಿಗೆ ಸೇರಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ.
ಬಿಜೆಪಿ ಸ್ವಂತ ಬಲದ ಮೇಲೆ ಸ್ಥಾನಗಳಿಸುವವರೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೆಡಿಎಸ್‌ನೊಂದಿಗಿನ ಮೈತ್ರಿಯನ್ನು ಪರೋಕ್ಷವಾಗಿ ತಳ್ಳಿಹಾಕಿದ್ದರು.
ಬಿಜೆಪಿ ಮುಖಂಡ ಮಾಜಿ ಸಚಿವ ಆರ್.ಅಶೋಕ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ಹಿಡಯಲೇಬೇಕು ಎನ್ನುವ ಹಟದಿಂದಾಗಿ ತೆರೆಮರೆಯ ಚಟುವಟಿಕೆ ಆರಂಭಿಸಿದ್ದರು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗಿದ್ದರಿಂದ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ