ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ ಅರ್ಜಿಯ ವಿಚಾರಣೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೆಪ್ಟೆಂಬರ್ 20 ರಂದು ನೀಡಿರುವ ಆದೇಶ ಮಾರ್ಪಾಡು ಕೋರಿ ರಾಜ್ಯ ಸರಕಾರ ಇಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಕರ್ನಾಟಕ ಸರಕಾರಕ್ಕೆ ನಿರ್ದೇಶನ ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ದ್ವಿಸದಸ್ಯೆ ಪೀಠದ ಮುಂದೆ ನಾಳೆ ವಿಚಾರಣೆಗೆ ಬರಲಿದೆ.
ಸೆಪ್ಟೆಂಬರ್ 20 ರಂದು ನಡೆದ ವಿಚಾರಣೆಯಲ್ಲಿ ಸೆಪ್ಟೆಂಬರ್ 28ರವರೆಗೂ ಪ್ರತಿ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆದೇಶ ಹೊರಡಿಸಿತ್ತು. ಆದರೆ, ರಾಜ್ಯ ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಕಾವೇರಿ ಜಲಾಶಗಳಲ್ಲಿ ನೀರಿಲ್ಲವಾದ್ದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ