ಬೆಂಗಳೂರು: ನಮ್ಮ ಸರ್ಕಾರವಿದ್ದಾಗ ಕೋಮುಗಲಭೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ತಿದ್ದೆವು. ಆದರೆ ಈ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದಕ್ಕೇ ಇಂಥಹ ಘಟನೆಗಳು ನಡೆಯುತ್ತಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ನಡೆದ ಗಲಭೆ ಕುರಿತಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಘಟನೆ ನಡೆದಿರುವುದು. ಈಗ ಮುಖ್ಯಮಂತ್ರಿಗಳು ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುತ್ತಾರೋ ಅಥವಾ ಯಥಾವತ್ತು ರಾಜಕಾರಣಕ್ಕಾಗಿ ಆಡಳಿತ ಮಾಡುತ್ತಿದ್ದಾರೋ ಎಂದು ಸ್ಪಷ್ಟವಾಗುತ್ತದೆ.
ನಾವು ಅಧಿಕಾರದಲ್ಲಿದ್ದಾಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದೆವು. ಹೀಗಾಗಿ ಇಂತಹ ಕೃತ್ಯವೆಸಗುವವರಿಗೆ ಭಯವಿತ್ತು. ಆದರೆ ಈ ಸರ್ಕಾರ ಏನೂ ಮಾಡ್ತಿಲ್ಲ. ಹಾಗಾಗಿಯೇ ಭಯವಿಲ್ಲದೇ ಇಂಥಹ ಕೃತ್ಯವೆಸಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಿಎಫ್ ಸಂಘಟನೆ ಸೇರಿದಂತೆ ನಿಷೇಧಿತ ಸಂಘಟನೆಗಳು ಬೇರೆ ಬೇರೆ ಹೆಸರಿನಲ್ಲಿ ಕಾರ್ಯಾಚರಣೆ ಮಾಡುತ್ತಲೇ ಇದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆಪಾದಿಸಿದ್ದಾರೆ.