Select Your Language

Notifications

webdunia
webdunia
webdunia
webdunia

ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಡಿ ಬಾಂಬ್..!

ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ  ಸಿಡಿ ಬಾಂಬ್..!
bangalore , ಬುಧವಾರ, 21 ಜುಲೈ 2021 (21:05 IST)
* ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಸ್ವಯಂ ಘೋಷಿತ ಹಿಂದೂ ನಾಯಕ
* ಕಾಮಗಾರಿಯಲ್ಲಿ 10 ರಿಂದ 15 ಪರ್ಸೆಂಟ್ ಕಮೀಷನ್ ದಂಧೆ
* ಬಿಜಾಪುರ ಜಿಲ್ಲೆಗೆ ಭ್ರಷ್ಟ ಜಿಲ್ಲೆ ಹೆಸರು ತಂದುಕೊಟ್ಟ ಯತ್ನಾಳ್
* ಅಣು ಒಪ್ಪಂದದ ವೇಳೆ ಕಾಂಗ್ರೆಸ್‍ಗೆ ಹೊರಡಲು ಮುಂದಾಗಿದ್ದರು.
* ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಒಡೆಯಬೇಡಿ
 
ವಿಜಾಪುರ, ಜು.21- ಇನ್ನೊಬ್ಬರ ಸಿಡಿ ಬಗ್ಗೆ  ಅಪಾದನೆ ಮಾಡಿ ತನ್ನನ್ನು ತಾನು ಮಹಾನ್ ಸೊಬಗ ಎಂದು  ಹೇಳಿಕೊಳ್ಳುವ ಶಾಸಕ ಬಸನಗೌಡನಪಾಟೀಲ್‍ಯತ್ನಾಳ್ ನ್ಯಾಯಾಲಯದಿಂದ ಸಿಡಿ ಬಿಡುಗಡೆಗೆ ಏಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಬಿಜಾಪುರದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಶಂಕರ್ ಹದನೂರು ಹೊಸ ಬಾಂಬ್ ಸಿಡಿಸಿದ್ದಾರೆ.
 
ವಿಶೇಷವೆಂದರೆ ಈವರೆಗೂ ಬೇರೊಬ್ಬರ ಸಿಡಿ ಬಗ್ಗೆ ಮಾತನಾಡುತ್ತಿದ್ದ ಯತ್ನಾಳ್ ಇದೀಗ ಸ್ವತಹ ಅವರೇ ಸಿಡಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
 
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷರೂ ಆಗಿರುವ ಭೀಮಶಂಕರ್ ಹದನೂರು  ಅವರು ಕೆಲ ವರ್ಷಗಳ ಹಿಂದೆಯೇ ಸಿಡಿ ಬಿಡುಗಡೆ ಆಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಸುಳ್ಳೋ ಅಥವಾ ನಿಜವೋ? ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
 
ಶಾಸಕರು ಇಲ್ಲವೇ ಸಚಿವರು ಸಿಡಿ ಬಿಡುಗಡೆ ಆಗದಂತೆ ತಡೆಯಾಜ್ಞೆ ತಂದಿದ್ದಕ್ಕೆ ಮಾತನಾಡುವ ನಿಮಗೆ ಸ್ವತಃ ನೀವೇ ತಡೆಯಾಜ್ಞೆ ತಂದಿರುವುದರಿಂದ ಇನ್ನೊಬ್ಬರ ಬಗ್ಗೆ ಮಾತನಾಡಲು ಯತ್ನಾಳ್‍ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
 
ನಾನೊಬ್ಬ ಪ್ರಾಮಾಣಿಕ ಹಾಗೂ ಸಚ್ಚಾರಿತ್ರ್ಯ ರಾಜಕಾರಣಿ ಎಂದು ಬಿಂಬಿಸಿಕೊಳ್ಳುತ್ತಿರುವ ನೀವು ಬಿಜಾಪುರ  ನಗರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ 10 ರಿಂದ 15ರಷ್ಟು ಕಮೀಷನ್ ಹಣವನ್ನು ಗುತ್ತಿಗೆದಾರರಿಂದ ಪಡೆಯುತ್ತಿಲ್ಲವೇ ಎಂದು ತಿರುಗೇಟು ನೀಡಿದರು.
 
ಕರ್ನಾಟಕದಲ್ಲೇ ಇಂದು ಬಿಜಾಪುರ ನಗರ ಅತ್ಯಂತ ಭ್ರಷ್ಟ ಜಿಲ್ಲೆ ಎಂಬ ಕುಖ್ಯಾತಿ ಹೊಂದಿರುವುದೇ ಯತ್ನಾಳ್ ಅವರ ಭ್ರಷ್ಟಾಚಾರದಿಂದ. ಯಾವ ಕಾಮಗಾರಿಯಾದರೂ ಲಂಚ ನೀಡದೆ ಶಾಸಕರು ಬಿಡುವುದಿಲ್ಲ ಎಂದು ಗುತ್ತಿಗೆದಾರರೇ ಅಪಾದಿಸುತ್ತಾರೆ. ನೀವೇ ಭ್ರಷ್ಟಚಾರದಲ್ಲಿ ಮುಳುಗಿರುವಾಗ ಇನ್ನೊಬ್ಬರ ಬಗ್ಗೆ  ಮಾಡುವ ನೈತಿಕತೆ ನಿಮಗಿಲ್ಲ ಎಂದು ಭೀಮಶಂಕರ್‍ಹದನೂರು ತಿರುಗೇಟು ನೀಡಿದರು.
 
ಬಿಜಾಪುರ ನಗರ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಎರಡು, ಮೂರು ರಸ್ತೆ ನೋಡಿದರೆ ಅದು ಅಭಿವೃದ್ಧಿ ಆಗುವುದಿಲ್ಲ, ಯಡಿಯೂರಪ್ಪನವರು ನಗರದ ಅಭಿವೃದ್ಧಿಗಾಗಿ ಯುಜಿಡಿ ಅನುದಾನದಡಿ ₹110 ಕೋಟಿ ನೀಡಿದ್ದರು, ಅದರಲ್ಲೂ ಕೂಡ ನೀವು ಕಮೀಷನ್ ಹೊಡೆಯಲು ಮುಂದಾಗಿದ್ದೀರಿ, ಬಿಜಾಪುರ ನಗರಕ್ಕೆ ಕೆಟ್ಟ ಹೆಸರು ಬಂದಿರುವುದೇ ನಿಮ್ಮ ಭ್ರಷ್ಟಾಚಾರದಿಂದ ಭೀಮಶಂಕರ್‍ಹದನೂರು   ಅವರು ತರಾಟೆಗೆ ತೆಗೆದುಕೊಂಡರು.
 
ಉಪಕಾರ ಸ್ಮರಣೆ ಇಲ್ಲ
 
2012ರಲ್ಲಿ ಬಿಜಾಪುರ, ಬಾಗಲಕೋಟೆ ಜಿಲ್ಲೆಗೆ ನಡೆದ ಸ್ಥಳೀಯ ಸಂಸತ್  ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಯತ್ನಾಳ್‍ಗೆ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಹನುಮಂತ ನಿರಾಣಿ, ಈಗಿನ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರ ಸಹೋದರ ಸಂಗಮೇಶ ನಿರಾಣಿ ಸೇರಿದಂತೆ  ಎಲ್ಲರೂ ಬೆಂಬಲಿಸಿದ್ದಕ್ಕೆ ನೀವು ಗೆದ್ದಿರಿ ಎಂದು ಹೇಳಿದರು.
 
ಗೆಲ್ಲುವ ತನಕ ಅವರನ್ನು  ಇಂದ್ರ, ಚಂದ್ರ ಎಂದು  ಹೊಗಳುತ್ತಿದ್ದ ನೀವು, ಹೊಳೆ ದಾಟಿದ ಮೇಲೆ ಅಂಬಿಗನು ಯಾರು ಎಂದು ಕೇಳುವ ರೀತಿ ಚುನಾವಣೆ ಗೆದ್ದ ಮೇಲೆ  ಅವರ ವಿರುದ್ಧವೇ ತಿರುಗಿ ಬಿದ್ದೀರಿ ನಿಮಗೆ ಉಪಕಾರ ಸ್ಮರಣೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
 
ಮುಖ್ಯಮಂತ್ರಿ ಯಡಿಯೂರಪ್ಪ  ಅವರಿಗೆ ಅಂದು ಯತ್ನಾಳ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದೆವು, ಏಕೆಂದರೆ ಇವರ ಹಿನ್ನೆಲೆ ನಮಗೆ ಮೊದಲೇ ತಿಳಿದಿತ್ತು. ಅಂದು  ನಿರಾಣಿ ಸೇರಿದಂತೆ ಅನೇಕರು ಬಿಎಸ್‍ವೈಗೆ ಮನವಿ ಮಾಡಿದ್ದರಿಂದ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಲ್ಲದೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು ಎಂದು ಹೇಳಿದರು.
 
ಯಡಿಯೂರಪ್ಪನವರನ್ನು ಇಂದ್ರ, ಚಂದ್ರ ಎಂದು ಹೊಗಳಿದಿರಿ,  ಆದರೆ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಈಗ ಅವರ ವಿರುದ್ಧವೇ ತಿರುಗಿ ಮಾತನಾಡುತ್ತಿದ್ದೀರಿ, ಉಂಡ ಮನೆಯ ಗಳ ಇರಿಬೇಡಿ ಎಂದು ಟೀಕಾಪ್ರಹಾರ ನಡೆಸಿದರು. 
 
ಆಗ  ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ  ಬಿ.ಎಲ್.ಸಂತೋಷ್ ಅವರನ್ನೂ ಸಹ ಟೀಕಿಸಿದಿರಿ, ಈಗ ಯಾವುದೋ ಸ್ಥಾನಮಾನ ಸಿಕ್ಕಿಬಿಡುತ್ತದೆ ಎಂಬ ಕಾರಣಕ್ಕೆ ಅವರನ್ನು ಹೊಗಳುತ್ತಿದ್ದೀರಿ, ಇದರ ಮರ್ಮವೇನು ಎಂದು ಪ್ರಶ್ನಿಸಿದರು.
 
ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮನೆಯ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಬೇಡಿ, ಬೆಳಗಾವಿಯಲ್ಲಿ ಇದೇ ಪಂಚಮಶಾಲಿ ಸಮುದಾಯದ ಸ್ವಾಮೀಜಿಗಳು ಮೀಸಲಾತಿ ಹೋರಾಟ ನಡೆಸುವಾಗ ಅವರ ಮೇಲೆ ಹಲ್ಲೆ ಮಾಡಲು ಹೋಗಿದ್ದೀರಿ, ಈಗ ಅದೇ ಸ್ವಾಮೀಜಿಯನ್ನು ಮುಂದಿಟ್ಟುಕೊಂಡು ನಿಮ್ಮ ಸ್ವಾರ್ಥ ಸಾಧನೆಗಾಗಿ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
 
ಮಾತೆತ್ತಿದರೆ ನಾನು ಅಟಲ್‍ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದೆ, ಅಡ್ವಾಣಿ ಅವರ ಜತೆ ಸಂಸತ್‍ನಲ್ಲಿದ್ದೆ  ನಾನು ಪಕ್ಷನಿಷ್ಠನಾಗಿದ್ದೇನೆಂದು ಹೇಳುತ್ತಿದ್ದಿರಿ, ಮಾಜಿ ಸಚಿವ ಬಿ.ಆರ್.ಪಾಟೀಲ್ ವಿರುದ್ಧ ಸಂಚು ರೂಪಿಸಿದವರು ಯಾರು ಎಂದು ಭೀಮಶಂಕರ್‍ಹದನೂರು  ಪ್ರಶ್ನಿಸಿದರು.
 
ಅಮೆರಿಕಾದ ಜೊತೆ ನಾಗರೀಕ ಪರಮಾಣು ಒಪ್ಪಂದ ಮಾಡಿಕೊಂಡಿದ್ದನ್ನು ವಿರೋಧಿಸಿ ಇದೇ ಯತ್ನಾಳ್ ಕಾಂಗ್ರೆಸ್‍ಗೆ ಹೊರಡಲು ಸಿದ್ಧರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಪ್ತ ಸಹಾಯಕರು ಅಂದು ಮಾಹಿತಿ  ಕೊಟ್ಟಿದ್ದರು. ಸಂಸತ್‍ನಲ್ಲಿ ಪಕ್ಷದ ವಿರುದ್ಧವೇ ಮತಹಾಕಲು ಹೋಗಿದ್ದ ನಿಮಗೆ ಪಕ್ಷ ನಿಷ್ಠೆ ಇದೆಯೇ ಎಂದು ಪ್ರಶ್ನೆ ಮಾಡಿದರು.
 
ಇನ್ನು ಮುಂದಾದರೂ ಊಟ ಮಾಡಿದ ತಟ್ಟೆಯಲ್ಲಿ ಉಗಿಯುವುದನ್ನು ಯತ್ನಾಳ್ ನಿಲ್ಲಿಸಬೇಕು, ಇಲ್ಲದಿದ್ದರೆ ಬಿಜಾಪುರ ಜನ ನಿಮಗೆ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
 
ಒಂದು  ವೇಳೆ ಕೇಂದ್ರ ವರಿಷ್ಠರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಈ ಬಾರಿ ಸಿಎಂ ಸ್ಥಾನ ಪಂಚಮಶಾಲಿಗೆ ಸಿಗಬಹುದು, ಅದು ಯತ್ನಾಳ್‍ರೇ ಇರಬಹುದು ಇಲ್ಲವೇ ಬೆಲ್ಲದ್ ಅವರೇ ಇರಬಹುದು. ನೀವು ನಮ್ಮ ಸಮುದಾಯಕ್ಕೆ ಸಿಗುವ ಅವಕಾಶಕ್ಕೆ ಕಲ್ಲು ಹಾಕಬೇಡಿ ಎಂದು ಭೀಮಶಂಕರ್‍ಹದನೂರು  ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಜೆ.ಪಿ ಭಾವುಟವನ್ನು ಹಾರಿಸಿದ ಮಹಾ ನಾಯಕ ನನ್ನು ಕಿತ್ತೊಗೆಯುವ ಕೆಲಸಕ್ಕೆ ಕೈ ಹಾಕಿರುವ ಹೈ ಕಮಾಂಡ್