ರಾಯಚೂರು: ತಾಲ್ಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದ ಬಾಣಂತಿ ಸಾವು ಪ್ರಕರಣ ಸಂಬಧ ವೈದ್ಯರ ವಿರುದ್ಧ ಕುಟುಂಬಸ್ಥರು ಲೋಕಾಯುಕ್ತಕ್ಕೆ ದೂಡು ನೀಡಿದ್ದಾರೆ.
ಬಾಣಂತಿ ಸಾವಿಗೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಬಾಣಂತಿಯ ತಾಯಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಅದರಂತೆ ದೇವದುರ್ಗ ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಾನಂದ, ವೈದ್ಯ ಡಾ.ಗಂಗಾಧರ, ನರ್ಸ್‌ಗಳಾದ ಜ್ಯೋತಿ, ಲಕ್ಷ್ಮೀ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಇನ್ನೂ ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿಯೂ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ನ.20 ರಂದು ರೇಖಾ(30) ಅವರು ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶುಸಹಿತ ಸಾವನ್ನಪ್ಪಿದ್ದರು. ಸರಿಯಾದ ಸಮಯಕ್ಕೆ ಹೆರಿಗೆ ಮಾಡದೆ, ಚಿಕಿತ್ಸೆ ನೀಡದಿರುವುದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ದೇವದುರ್ಗ ತಾಲೂಕಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೃತಳ ಕುಟುಂಬಸ್ಥರು ಆಗ್ರಹಿಸಿದ್ದಾರೆ