ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ಮಳೆಯಿಂದಾದ ಅವಾಂತರಗಳಿಂದ ಜನರ ಸಮಸ್ಯೆ ಆಲಿಸಲು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ರಂಗಕ್ಕಿಳಿದಿದ್ದಾರೆ.
ಬಿಬಿಎಂಪಿ ವಾರ್ ರೂಂಗೆ ಎಂಟ್ರಿ ಕೊಟ್ಟಿರುವ ಡಿಕೆ ಶಿವಕುಮಾರ್ ಸ್ವತಃ ತಾವೇ ಜನರ ಕರೆಗಳಿಗೆ ಉತ್ತರಿಸಿದ್ದಾರೆ. ನಗರದಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಕೆಲವೆಡೆ ಕೊಳಚೆ ನೀರು ಮನೆಯೊಳಗೇ ನುಗ್ಗಿದೆ. ಇದರಿಂದಾಗಿ ಜನ ಪರದಾಡುವಂತಾಗಿದೆ.
ಜನರು ಅವ್ಯವಸ್ಥೆಗೆ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಿಶೇಷವಾಗಿ ನಿನ್ನೆ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್, ಮಾನ್ಯತಾ ಟೆಕ್ ಪಾರ್ಕ್ ಬಳಿ ರಸ್ತೆಯಿಡೀ ಜಲಾವೃತವಾಗಿದ್ದ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಇಂದೂ ಕೂಡಾ ಮಳೆಯ ವಾತಾವರಣ ಮುಂದುವರಿದಿದೆ.
ಅಕ್ಟೋಬರ್ 19 ರವರೆಗೂ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಯಶವಂತಪುರ ಠಾಣಾ ವ್ಯಾಪ್ತಿಯ ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ಮರ ಬಿದ್ದಿರುವ ಕಾರಣ ರಸ್ತೆ ಸಂಚಾರ ಬಂದ್ ಆಗಿದೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಇಂದೂ ಕೂಡಾ ಸಂಚಾರಕ್ಕೆ ಅಡಚಣೆಯಾಗಲಿದೆ. ಯಾವುದೇ ತುರ್ತು ಸಂದರ್ಭದಲ್ಲಿ 112 ಸ್ಥಾನಕ್ಕೆ ಕರೆ ಮಾಡಿ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.