ಬೆಂಗಳೂರು: ಉತ್ತರ ತಾಲ್ಲೂಕಿನ ನೆಲಮಂಗಲ ಪಟ್ಟಣದ ಬಳಿಯ ಅಡಕಮಾರಹಳ್ಳಿಯಲ್ಲಿ ಗುರುವಾರ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಾಗಿ ಇಬ್ಬರು ಸಜೀವ ದಹನವಾಗಿ, ನಾಲ್ವರು ಗಂಭೀರವಾಗಿ ಘಟನೆ ಇಂದು ನಡೆದಿದೆ.
ಮೃತರನ್ನು 50 ವರ್ಷದ ನಾಗರಾಜು ಮತ್ತು 50 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
ಗಾಯಗೊಂಡ ಅಭಿಷೇಕ್ ಗೌಡ, ಶಿವಶಂಕರ್, ಲಕ್ಷ್ಮಿದೇವಿ ಮತ್ತು ಬಸನಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂದ ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ನಾಗರಾಜು ಬಳ್ಳಾರಿ ಮೂಲದವರಾಗಿದ್ದು, ಪತ್ನಿ ಲಕ್ಷ್ಮಿದೇವಿ ಮತ್ತು ಮಕ್ಕಳಾದ ಅಭಿಷೇಕ್ ಗೌಡ ಮತ್ತು ಬಸನ ಗೌಡ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಗ್ಯಾಸ್ ಖಾಲಿಯಾಗಿದ್ದಾಗ ಮತ್ತೊಂದು ಸಿಲಿಂಡರ್ ಅನ್ನು ಜೋಡಿಸಿದ ಅಭಿಷೇಕ್ ಅನಿಲ ಸೋರಿಕೆಯಾಗಿರುವುದನ್ನು ಗಮನಿಸಿಲ್ಲ. ಬಳಿಕ ದೇವರ ಫೋಟೊ ಮುಂದೆ ದೀಪ ಹಚ್ಚಿದಾಗ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಮನೆಗೆ ಬೆಂಕಿ ವ್ಯಾಪಿಸಿದೆ ಎಂದು ವರದಿಯಾಗಿದೆ.
ಬೆಂಕಿ ಮನೆಗೆ ಆವರಿಸುತ್ತಿದ್ದಂತೆ, ಲಕ್ಷ್ಮಿದೇವಿ ಮತ್ತು ಬಸನಗೌಡ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನಾಗರಾಜು ಮತ್ತು ಅಭಿಷೇಕ್ ಒಳಗೆ ಸಿಲುಕಿಕೊಂಡಿದ್ದಾರೆ. ಆಗ ನೆರೆಮನೆಯ ಶ್ರೀನಿವಾಸ್ ಮತ್ತು ಮನೆ ಮಾಲೀಕ ಶಿವಶಂಕರ್ ಬೆಂಕಿಯನ್ನು ನಂದಿಸಲು ಮತ್ತು ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.
ದುರಂತವೆಂದರೆ, ನಾಗರಾಜು ಮತ್ತು ಅಭಿಷೇಕ್ ಅವರನ್ನು ಉಳಿಸಲು ಪ್ರಯತ್ನಿಸುವಾಗ, ಶ್ರೀನಿವಾಸ್ ಬೆಂಕಿಯಲ್ಲಿ ಸಿಲುಕಿಕೊಂಡು ಜೀವಂತ ದಹನವಾಗಿದ್ದಾರೆ. ಗಾಯಾಳುಗಳು ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.