Publish Date: Sat, 25 Mar 2023 (20:20 IST)
Updated Date: Sat, 25 Mar 2023 (20:04 IST)
ಟಯರ್ ಬ್ಲಾಸ್ಟ್ ಆದರೂ ಸಹ ಚಾಲಕನೊಬ್ಬ ಕಿ.ಮೀಟರುಗಟ್ಟಲೇ ರಿಮ್ ನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿದ ಘಟನೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾನಗರದಿಂದ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಯುವಕನೊಬ್ಬ ಮನಸೋ ಇಚ್ಚೆ ತನ್ನ ಟಯೋಟಾ ಗ್ಲಾಂಜಾ ಕಾರು ಚಲಾಯಿಸಿದ್ದು ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಆಗಿದೆ. ಆದರೂ ಸಹ ರಿಮ್ ನಲ್ಲೆ ಕಾರು ಚಲಾಯಿಸಿದ್ದಾನೆ.
ಸುಮಾರು 100-120 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಕಾರನ್ನ ಕಂಡು ಜನ ಭಯಭೀತರಾಗಿದ್ದಾರೆ. ಕಾರಿನ ವೇಗ ನೋಡಿದ ರಾತ್ರಿ ಪಾಳಿ ಪೊಲೀಸರು ಸುಮಾರು 2-3 ಕಿ.ಮೀ ದೂರು ಸಹ ಕಾರನ್ನ ಫಾಲೋ ಮಾಡಿದ್ದಾರೆ. ಕೊನೆಗೆ ಕಾರಿನ ಆಕ್ಸೆಲ್ ಕಟ್ ಆಗಿದ್ದಕ್ಕೆ ಮುನಿಯಪ್ಪ ಸರ್ಕಲ್ ಬಳಿ ಕಾರು ನಿಂತಿದೆ. ಮದ್ಯದ ಅಮಲಿನಲ್ಲಿ ಪುಂಡಾಟವೆಸಗಿದ ಅನುಮಾನದಲ್ಲಿ ತಕ್ಷಣವೇ ಆರೋಪಿ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸ್ ಹೊಯ್ಸಳದಲ್ಲಿ ಠಾಣೆಗೆ ಹೋದ ಯುವಕ ಕೆಲವೇ ಸಮಯದಲ್ಲಿ ತನ್ನ ಮನೆಗೆ ವಾಪಾಸಾಗಿದ್ದಾನೆ. ಐಷಾರಾಮಿ ಕಾರಿನಲ್ಲಿ ಬಂದ ಯುವಕನ ಕಡೆಯವರನ್ನ ನೋಡಿದ ಪೊಲೀಸರು ಆತನನ್ನ ಬಿಟ್ಟು ಕಳುಹಿಸಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.