ಧಾರವಾಢ: ಸಿಎಂ ಸಿದ್ದರಾಮಯ್ಯ ಸಾರ್ವಜನಿಕ ವೇದಿಕೆಯಲ್ಲಿ ಹೊಡೆಯಲು ಮುಂದಾಗಿದ್ದ ಎಎಸ್ಪಿ ಎಸ್ಎಸ್ ಭರಮನಿ ಈಗ ಅಂದಿನ ಘಟನೆಯಿಂದ ನೋವಾಗಿ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ.
ಈ ಬಗ್ಗೆ ಈಗಾಗಲೇ ಅವರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಸ್ವಯಂ ನಿವೃತ್ತಿ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ಸಿದ್ದರಾಮಯ್ಯನವರಿಂದ ಸಾರ್ವಜನಿಕ ವೇದಿಕೆಯಲ್ಲಿ ಅಪಮಾನವಾಗಿದ್ದಕ್ಕೆ ಬೇಸರಗೊಂಡು ಈ ನಿರ್ಧಾರಕ್ಕೆ ಬರುತ್ತಿರುವುದಾಗಿ ಹೇಳಿದ್ದಾರೆ.
ಕಳೆದ 31 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮೊನ್ನೆಯ ಕೇಂದ್ರದ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲೂ ನನಗೆ ವೇದಿಕೆ ಜವಾಬ್ಧಾರಿ ನೀಡಲಾಗಿತ್ತು. ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಹಾಗಿದ್ದರೂ ಸಿಎಂ ಭಾಷಣ ಶುರು ಮಾಡಿ 10 ನಿಮಿಷದ ಬಳಿಕ ಕೆಲವು ಮಹಿಳೆಯರು ಕಪ್ಪು ಬಾವುಟ ತೋರಿ ಘೋಷಣೆ ಕೂಗಿದರು. ಆವತ್ತು ಅವರು ಕರೆದಾಗ ಹೋಗಿ ವಿನಮ್ರವಾಗಿ ವಂದಿನಿ ನಿಂತುಕೊಂಡೆ. ಆಗ ನನ್ನ ಮೇಲೆ ಕಪಾಳ ಮೋಕ್ಷ ಮಾಡಲು ಮುಂದಾದರು. ನಾನು ಹಿಂದೆ ಸರಿದು ಸಾರ್ವಜನಿಕವಾಗಿ ಕಪಾಳಮೋಕ್ಷ ಆಗುವುದನ್ನು ತಪ್ಪಿಸಿಕೊಂಡೆ. ಆದರೆ ಇದನ್ನು ಎರಡು ದಿನ ನಿರಂತರವಾಗಿ ಟಿವಿ ವಾಹಿನಿಗಳಲ್ಲಿ ನೀವು ಗಮನಿಸಿರುತ್ತೀರಿ. ಸಮವಸ್ತ್ರದಲ್ಲಿದ್ದ ನನ್ನ ಅವಮಾನಿಸಿ ನನ್ನ ಹಾಗೂ ನನ್ನ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿಸಿದ್ದರಿಂದ ಮಾನಸಿಕವಾಗಿ ನೋವಾಗಿ ಸ್ವಯಂ ನಿವೃತ್ತಿ ಪಡೆಯುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಅವರ ಪತ್ರದ ಬಗ್ಗೆ ಬಿಜೆಪಿ ಟೀಕೆ ನಡೆಸಿದ್ದು, ದುರಹಂಕಾರಿ ಸಿದ್ದರಾಮಯ್ಯನವರೇ ನಿಮ್ಮ ಹೆಸರಿನ ಮುಂದೆ ಮುಖ್ಯಮಂತ್ರಿ ಎಂದಿಲ್ಲದೇ ಇದ್ದಿದ್ದರೆ ಅಂದೇ ನಿಮ್ಮ ಗರ್ವ ಅಡಗಿಹೋಗುತ್ತಿತ್ತು. ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡಾ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು ನಿಮ್ಮ ಜೊತೆ ನಾವಿದ್ದೇವೆ, ದಯಮಾಡಿ ಸ್ವಯಂ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಆಗ್ರಹಿಸಿದ್ದಾರೆ.