ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಸಿಎಂ ಆಗಿದ್ದಾಗ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪ ಹಗರಣವನ್ನು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಎಸ್‌ಐಟಿ ಅಭಿಯೋಜನಾ ಮಂಜೂರಾತಿ (ಪ್ರಾಸಿಕ್ಯೂಷನ್) ಕೋರಿ ರಾಜ್ಯಪಾಲರಿಗೆ ಮರು ಪ್ರಸ್ತಾವ ಸಲ್ಲಿಸಿರುವುದು ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇನ್ನೂ ಈ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಧ್ಯೆ ವಾಕ್ಸಮರ ಜೋರಾಗಿದೆ. ಮುಲಾಜಿಲ್ಲದೆ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ಅವರು ನನ್ನನ್ನು ಮುಟ್ಟಕ್ಕೆ ನೂರು ಸಿದ್ದರಾಮಯ್ಯ ಬರ್ಬೇಕು ಎಂದು ಕೌಂಟರ್ ಕೊಟ್ಟಿದ್ದಾರೆ.
ಇದೀಗ ಈ ಸಂಬಂಧ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ಎಚ್‌ಡಿಕೆ ವಿರುದ್ಧ ಪತ್ರ ರಾಜ್ಯಪಾಲರ ಟೇಬಲ್ ತಲುಪುತ್ತಿದ್ದ ಹಾಗೇ ಅವರಲ್ಲಿ ಉದ್ವೇಗ, ಆತಂಕ ಮಿತಿ ಮೀರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬರೆದುಕೊಂಡಿದೆ.
ಕಳ್ಳನ ಮನಸು ಉಳ್ಳುಳ್ಳಗೆ!
ಗಣಿ ಹಗರಣದ ತನಿಖೆಗೆ ಅನುಮತಿ ಕೋರಿದ ಮತ್ತೊಂದು ಪತ್ರ ರಾಜ್ಯಪಾಲರ ಟೇಬಲ್ ತಲುಪುತ್ತಿದ್ದಂತೆಯೇ ಎಚ್‌ಡಿ ಕುಮಾರಸ್ವಾಮಿ ಅವರಲ್ಲಿ ಉದ್ವೇಗ, ಆತಂಕ ಮಿತಿ ಮೀರಿದೆ.
ಆ ಆತಂಕದಲ್ಲೇ ಓಡೋಡಿ ಬಂದು ಮಾಧ್ಯಮಗಳ ಮುಂದೆ ಮನಬಂದಂತೆ ಮಾತಾಡುತ್ತಿದ್ದಾರೆ, ನನ್ನನ್ನು ಬಂಧಿಸಲು ಸಾಧ್ಯವೇ ಇಲ್ಲ ಎಂದು ಕಾನೂನಿಗೆ ಸವಾಲು ಹಾಕುತ್ತಿದ್ದಾರೆ.
ಕುಮಾರಸ್ವಾಮಿಯವರೇ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ನೀವು ಉಪ್ಪು ತಿಂದಾಗಿದೆ ನೀರು ಕುಡಿಯುವ ಸಮಯ ಸಮೀಪಿಸುತ್ತಿದೆ.