Publish Date: Sun, 30 Oct 2022 (16:56 IST)
Updated Date: Sun, 30 Oct 2022 (17:05 IST)
ಅಭಿಮಾನಿಗಳ ಆರಾಧ್ಯ ದೈವವಾಗಿರುವ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಒಂದು ವರ್ಷ ಕಳೆದಿದೆ. ಈ ನಡುವೆ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಕೇವಲ ಬೆಂಗಳೂರಷ್ಟೇ ಅಲ್ಲದೇ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪುನೀತ್‍ರನ್ನು ಅಭಿಮಾನಿಗಳು ನಿನ್ನೆ ಸ್ಮರಿಸಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಅಪ್ಪು ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೊಸ ಆನಂದೂರು ಗ್ರಾಮದ ಕಿರಣ್ ಮೃತ ಯುವಕ. ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿ, ಅನ್ನಸಂತರ್ಪಣೆ ಕೂಡ ನಡೆಸಿದ್ದ. ಆದರೆ ಕಾರ್ಯಕ್ರಮದ ಬಳಿಕ ಮನೆಗೆ ರಾತ್ರಿ 10 ಗಂಟೆಯಲ್ಲಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.