ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಅವರು ಮತ್ತೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭಿಸುವುದಾಗಿ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಸ್ತೆ ಬದಿ ನಿಲ್ಲುವ ವಾಹನಗಳ ಟೋಯಿಂಗ್ ಮಾಡುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಾಹನಗಳ ಟೋಯಿಂಗ್ ಬಗ್ಗೆಯೂ ಚರ್ಚೆ ಆಗಿದೆ. ಇದನ್ನು ಈ ಹಿಂದೆ ನನ್ನ ಗಮನಕ್ಕೆ ತರಲಾಗಿದೆ.
ಟೋಯಿಂಗ್ ಸಾರ್ವಜನಿಕರಿಗೆ ಉಪಯೋಗ ಆದರೆ ಜಾರಿಗೆ ತರುತ್ತೇವೆ. ಅದು ಸಾರ್ವಜನಿಕರಿಗೆ ತೊಂದರೆ ಆದರೆ ಜಾರಿಗೊಳಿಸಲ್ಲ. ಏನೇ ನಿರ್ಧಾರ ಮಾಡಿದರೂ ಸಾರ್ವಜನಿಕರಿಗೆ ಉಪಯೋಗ ಆಗಬೇಕು. ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ ತಗೋತೇವೆ. ಸಾರ್ವಜನಿಕರಿಗೆ ನಮ್ಮ ಕ್ರಮದಿಂದ ಒಳ್ಳೆಯದಾಗಬೇಕೇ ಹೊರತು ಕೆಟ್ಟದಾಗಬಾರದು ಎಂದರು.
ಬಾಡಿಗೆ ಟೋಯಿಂಗ್ ವಾಹನ ಬಳಸದೇ ಇಲಾಖೆಯ ವಾಹನ ಬಳಸಿಕೊಂಡು ಟೋಯಿಂಗ್ ನಡೆಸಲು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.
ಟೋಯಿಂಗ್ ಆರಂಭದ ಬಗ್ಗೆ ಕೆಲ ದಿನಗಳಿಂದಲೇ ಚರ್ಚೆ ನಡೆಯುತ್ತಿತ್ತು. ಈಗ ಸರ್ಕಾರವೇ ಅಧಿಕೃತವಾಗಿ ಟೋಯಿಂಗ್ ಆರಂಭವಾಗುವ ಬಗ್ಗೆ ತಿಳಿಸಿದೆ.